EV ವಾಹನ ಖರೀದಿ ದುಬಾರಿ, ಬೋರ್ನ್ ವೀಟಾಗೆ ಬಿಗ್ ಶಾಕ್!

ನೀವು ಎಲೆಕ್ಟ್ರಿಕ್ ಟೂ ವೀಲರ್ ಖರೀದಿ ಮಾಡಬೇಕು ಅಂತ ಯೋಚಿಸ್ತಾ ಇದ್ದರೆ, ಈಗ ಹೆಚ್ಚು ಹಣ ತೆರಬೇಕಾಗುತ್ತದೆ. ಎಲೆಕ್ಟ್ರಿಕ್ ಟೂ ವೀಲರ್ ಕಂಪನಿಗಳು ತಮ್ಮ EV ಬೆಲೆ ಏರಿಕೆ ಮಾಡಲು ಶುರು ಮಾಡಿವೆ.

alternate

ಚಿನ್ನದ ಬೆಲೆ ಈ ಮಾರ್ಕೆಟ್​ಗೆ ಸೂಕ್ತವಲ್ಲ
ಚಿನ್ನ ಪ್ರತಿ ದಿನ ಏರುತ್ತಿದೆ. ಹೊಸ ಹೊಸ ದಾಖಲೆ ಮಾಡುತ್ತಿದೆ… ಏಷ್ಯಾದಲ್ಲಿ ಭಾರೀ ಖರೀದಿ ಆಗ್ತಾ ಇರೋದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಏಷ್ಯಾದ ಜನರು ಭಾರೀ ಖರೀದಿ ಮಾಡ್ತಾ ಇರುವುದರಿಂದ ಚಿನ್ನದ ದರ ನಿರಂತರವಾಗಿ ಏರುತ್ತಿದೆ ಅಂತ ಗೋಲ್ಡ್ಮನ್ ಸ್ಯಾಕ್ಸ್ ವರದಿ ಮಾಡಿದೆ. ಭಾರತೀಯರು ಕೂಡ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡ್ತಾ ಇದ್ದಾರೆ. ಇದರ ಜೊತೆಗೆ ಬೆಳೆಯುತ್ತಿರುವ ರಾಷ್ಟ್ರಗಳ ಸೆಂಟ್ರಲ್‌ ಬ್ಯಾಂಕ್‌ಗಳು ಸಹ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿವೆ. ಇವು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿವೆ. ಕಳೆದ ಎರಡು ತಿಂಗಳಲ್ಲೇ ಚಿನ್ನದ ದರ ಶೇ.17 ಕ್ಕಿಂತ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಅಥವಾ ಸೆಂಟ್ರಲ್ ಬ್ಯಾಂಕ್‌ಗಳು ಖರೀದಿ ಕಡಿಮೆ ಮಾಡಬೇಕು ಅಥವಾ ಚೀನಾದ ಆರ್ಥಿಕ ಪ್ರಗತಿಯ ಬಗ್ಗೆ ಎದ್ದಿರುವ ಶಂಕೆಗಳು ನಿವಾರಣೆಯಾಗಬೇಕು. ಆಗ ಮಾತ್ರ ಚಿನ್ನದ ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದು ಅದು ಊಹಿಸಿದೆ.

ಅಗ್ಗದ ಮನೆಗಳಿಗೆ ಬೇಡಿಕೆ ಕುಸಿತ
ರಿಯಲ್ ಎಸ್ಟೇಟ್ ವಲಯ ಏರುತ್ತಿರುವ ಮಧ್ಯೆಯೇ, ಕಡಿಮೆ ಬೆಲೆಯ ಮನೆಗಳ ಮಾರಾಟದಲ್ಲಿ ನಿರಂತರ ಕುಸಿತ ಕಂಡುಬಂದಿದೆ…. ಹೌಸಿಂಗ್ ಬ್ರೋಕರೇಜ್ ಸಂಸ್ಥೆ ಪ್ರಾಪ್‌ಟೈಗರ್ ಅನ್ನು ಉಲ್ಲೇಖಿಸಿ ಪಿಟಿಐ ವರದಿ ಹೀಗೆ ಹೇಳಿದೆ. ಜನವರಿ-ಮಾರ್ಚ್ 2024 ರ ಅವಧಿಯಲ್ಲಿ, ಒಟ್ಟು ಮನೆಗಳ ಮಾರಾಟದಲ್ಲಿ ಕೈಗೆಟುಕುವ ದರದ ಮನೆಗಳ ಪಾಲು 22 ಪರ್ಸೆಂಟ್‌ಗೆ ಇಳಿದಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಒಟ್ಟು ಮಾರಾಟದಲ್ಲಿ ಕೈಗೆಟಕುವ ದರದ ಮನೆಗಳ ಪಾಲು ಶೇ.48 ರಷ್ಟಿತ್ತು… ಪ್ರಾಪ್ ಟೈಗರ್ ಮಾಹಿತಿ ಪ್ರಕಾರ 2024 ರ ಮೊದಲ ಮೂರು ತಿಂಗಳ ಅವಧಿಯಲ್ಲಿ ದೇಶದ 8 ಪ್ರಮುಖ ನಗರಗಳಲ್ಲಿ ಒಟ್ಟು 1 ಲಕ್ಷದ 20 ಸಾವಿರದ 640 ಮನೆಗಳು ಮಾರಾಟವಾಗಿವೆ. ವರ್ಷದ ಹಿಂದೆ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 41 ರಷ್ಟು ಹೆಚ್ಚು ಮನೆಗಳ ಮಾರಾಟವಾಗಿದೆ. ಒಂದು ವರ್ಷದ ಹಿಂದೆ, ಜನವರಿ-ಮಾರ್ಚ್ 2023 ರ ಅವಧಿಯಲ್ಲಿ, ಪ್ರಮುಖ 8 ನಗರಗಳಲ್ಲಿ ಒಟ್ಟು ಮನೆಗಳ ಮಾರಾಟವು 85 ಸಾವಿರದ 840 ಯುನಿಟ್‌ಗಳಾಗಿತ್ತು.

ಸಗಟು ಹಣದುಬ್ಬರದಲ್ಲಿ ಸ್ವಲ್ಪ ಹೆಚ್ಚಳ
ಸಗಟು ಹಣದುಬ್ಬರವು ಮಾರ್ಚ್ ತಿಂಗಳಲ್ಲಿ ಸ್ವಲ್ಪ ಹೆಚ್ಚಾಗಿ 0.5 ಶೇಕಡಾಕ್ಕೆ ಏರಿಕೆಯಾಗಿದೆ. ಹಿಂದಿನ ತಿಂಗಳಲ್ಲಿ 0.2 ಶೇಕಡಾ ಆಗಿತ್ತು. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ವಾರ್ಷಿಕ ಆಧಾರದ ಮೇಲೆ 0.53 ಶೇಕಡಾಕ್ಕೆ ಏರಿದೆ. ಫೆಬ್ರವರಿಯಲ್ಲಿ 0.20 ಶೇಕಡಾ ಆಗಿತ್ತು. ಸಗಟು ಈರುಳ್ಳಿ ಬೆಲೆ ಫೆಬ್ರವರಿಯಲ್ಲಿ 29.22 ರಷ್ಟು ಏರಿಕೆಯಾಗಿದ್ದು, ಮಾರ್ಚ್‌ನಲ್ಲಿ 56.99 ರಷ್ಟು ಹೆಚ್ಚಾಗಿದೆ. ಮುಂದಿನ ಮುಂಗಾರು ಬೆಳೆಯನ್ನು ಕಟಾವು ಮಾಡುವವರೆಗೆ ಭಾರತದಲ್ಲಿ ಈರುಳ್ಳಿ ಪೂರೈಕೆಯಲ್ಲಿ ಭಾರಿ ಕೊರತೆ ಆಗಬಹುದು. ಈ ಮಧ್ಯೆ, ಆಲೂಗಡ್ಡೆಯ ಸಗಟು ಬೆಲೆ ಸೂಚ್ಯಂಕ ಫೆಬ್ರವರಿಯಲ್ಲಿ 15.34 ಪರ್ಸೆಂಟ್‌ಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇಕಡಾ 52.96 ರಷ್ಟು ಏರಿಕೆಯಾಗಿದೆ.

ಎಲೆಕ್ಟ್ರಿಕ್ ಟೂ ವೀಲರ್ ದುಬಾರಿ
ನೀವು ಎಲೆಕ್ಟ್ರಿಕ್ ಟೂ ವೀಲರ್ ಖರೀದಿ ಮಾಡಬೇಕು ಅಂತ ಯೋಚಿಸ್ತಾ ಇದ್ದರೆ, ಈಗ ಹೆಚ್ಚು ಹಣ ತೆರಬೇಕಾಗುತ್ತದೆ. ಎಲೆಕ್ಟ್ರಿಕ್ ಟೂ ವೀಲರ್ ಕಂಪನಿಗಳು ತಮ್ಮ EV ಬೆಲೆ ಏರಿಕೆ ಮಾಡಲು ಶುರು ಮಾಡಿವೆ. ಇವಿ ಕಂಪನಿಗಳಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣ ಕಡಿಮೆಯಾಗಿದೆ. FAME-II ಯೋಜನೆ 31 ಮಾರ್ಚ್ 2024 ಕ್ಕೆ ಮುಗಿದಿದೆ. ಬದಲಿಗೆ, ಹೊಸ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (EMPS) ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಹೀಗಾಗಿ, ಏಥರ್, ಬಜಾಜ್, ಟಿವಿಎಸ್ ಮತ್ತು ವಿಡಾದಂತಹ ದೊಡ್ಡ ಇವಿ ಕಂಪನಿಗಳು ತಮ್ಮ ದ್ವಿಚಕ್ರ ವಾಹನಗಳ ಬೆಲೆಯನ್ನು 16,000 ರೂ.ವರೆಗೆ ಹೆಚ್ಚಿಸಿವೆ. ಓಲಾ ಎಲೆಕ್ಟ್ರಿಕ್ ಬೆಲೆ ಏರಿಕೆಯನ್ನು ಘೋಷಿಸದಿದ್ದರೂ, ಶೀಘ್ರದಲ್ಲೇ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.

ಐಆರ್‌ಸಿಟಿಸಿಯಿಂದ ಅಯೋಧ್ಯೆ – ಕಾಶಿ ದರ್ಶನಕ್ಕೆ ಪ್ಯಾಕೇಜ್
IRCTC ಪುಣ್ಯ ಕ್ಷೇತ್ರ ಯಾತ್ರೆಯ ಅಡಿಯಲ್ಲಿ ಅಯೋಧ್ಯೆ ಮತ್ತು ಕಾಶಿಗೆ ವಿಶೇಷ ಟೂರಿಸಂ ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ ಪ್ಯಾಕೇಜ್‌ನಲ್ಲಿ, ನೀವು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ಅಯೋಧ್ಯೆ-ಕಾಶಿ ಪುಣ್ಯ ಕ್ಷೇತ್ರ ಯಾತ್ರಾ ಪ್ಯಾಕೇಜ್ ಬುಕ್ ಮಾಡಬಹುದು. ಈ ಸಂಪೂರ್ಣ ಪ್ಯಾಕೇಜ್ 10 ದಿನ, 9 ರಾತ್ರಿಗಳ ವರೆಗೆ ನಡೆಯಲಿದೆ. ಇದರಲ್ಲಿ, ಅಯೋಧ್ಯೆಯಿಂದ ಕಾಶಿ, ಪ್ರಯಾಗ್‌ರಾಜ್ ಮತ್ತು ಪುರಿಯವರೆಗಿನ ಅನೇಕ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ನೀವು ಸಿಕಂದರಾಬಾದ್-ಪುರಿ-ಕೋನಾರ್ಕ್-ಗಯಾ-ವಾರಣಾಸಿ-ಅಯೋಧ್ಯೆಯಲ್ಲಿ ಏರಿಳಿಯಬಹುದು. ಸಂಪೂರ್ಣ ಪ್ಯಾಕೇಜ್‌ನಲ್ಲಿ, ನೀವು ವಿವಿಧ ಸ್ಥಳಗಳಲ್ಲಿ ಉಳಿಯಲು ಸಹ ಅವಕಾಶವನ್ನು ಪಡೆಯುತ್ತೀರಿ. ಇದರಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವೂ ಇರಲಿದ್ದು, ಕ್ಯಾಟಗರಿಗೆ ಅನುಗುಣವಾಗಿ 16,525 ರಿಂದ 33,995 ರೂ. ಪೇ ಮಾಡಬೇಕಾಗುತ್ತದೆ.

“ಹೆಲ್ತ್‌ ಡ್ರಿಂಕ್‌ ಕ್ಯಾಟಗರಿಯಿಂದ ಬೋರ್ನ್‌ವಿಟಾ ತೆಗೆದುಹಾಕಿ”
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಪೋರ್ಟಲ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ‘ಹೆಲ್ತ್ ಡ್ರಿಂಕ್ಸ್’ ಕ್ಯಾಟಗರಿಯಿಂದ ಬೋರ್ನ್‌ವಿಟಾ ಸೇರಿದಂತೆ ಎಲ್ಲ ಡ್ರಿಂಕ್ಸ್‌ ಮತ್ತು ಬೆವರೇಜ್‌ಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ. ಏಪ್ರಿಲ್ 10 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸಚಿವಾಲಯವು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ NCPCR ಕಾಯಿದೆ 2005 ರ ಸೆಕ್ಷನ್ 14 ರ ಅಡಿಯಲ್ಲಿ, ತನಿಖೆ ಮಾಡಿದಾಗ ಆಹಾರ ಕಾನೂನುಗಳಲ್ಲಿ ಯಾವುದೇ ಪಾನೀಯವನ್ನು ಆರೋಗ್ಯ ಪಾನೀಯ ಎಂದು ವ್ಯಾಖ್ಯಾನಿಸಿಲ್ಲ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಎನ್‌ಸಿಪಿಸಿಆರ್ ನಡೆಸಿದ ತನಿಖೆಯ ಪ್ರಕಾರ, ಬೋರ್ನ್‌ವಿಟಾದಲ್ಲಿನ ಸಕ್ಕರೆಯ level acceptable range ಗಿಂತ ಹೆಚ್ಚಿರುವುದು ಬೆಳಕಿಗೆ ಬಂದಿದೆ.

Published: April 15, 2024, 15:44 IST

EV ವಾಹನ ಖರೀದಿ ದುಬಾರಿ, ಬೋರ್ನ್ ವೀಟಾಗೆ ಬಿಗ್ ಶಾಕ್!