ನೆಸ್ಲೆ ನಂತರ ಮತ್ತೊಂದು ಕಂಪನಿಗೆ ಸಂಕಷ್ಟ, ಈ ಫಿಶ್ ಕರಿ ತಿನ್ನಂಗಿಲ್ಲ!

ನೆಸ್ಲೆ ನಂತರ , ಈಗ ಎವರೆಸ್ಟ್‌ನ ಫಿಶ್ ಕರಿ ಮಸಾಲಾ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭಾರತದಿಂದ ಆಮದು ಮಾಡಿಕೊಂಡ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಮಾರುಕಟ್ಟೆಯಿಂದ ಹಿಂಪಡೆಯುವುದಾಗಿ ಸಿಂಗಾಪುರ ಘೋಷಿಸಿದೆ .

alternate

ಒಂದು ದಶಕದಲ್ಲೇ ಅತಿ ಹೆಚ್ಚು ಲೇ ಆಫ್‌ ಮಾಡುತ್ತಿರುವ ಕಂಪನಿ ಯಾವುದು? ನೆಸ್ಲೆ ನಂತರ, ಯಾವ ಬ್ರಾಂಡ್‌ ಬಗ್ಗೆ ಅನುಮಾನ ಎದ್ದಿದೆ? ಸಾಲದ ಬಡ್ಡಿದರಗಳ ಬಗ್ಗೆ ಯಾವ ಸುದ್ದಿ ಇದೆ? ಇವಿಷ್ಟು ಮಾಹಿತಿಯನ್ನು ನಾವು ನೀಡುತ್ತೇವೆ. ವಿಶ್ವದ ಎಲ್ಲೆಡೆ ಹೆಸರಾಂತ ಕಂಪನಿಗಳಲ್ಲಿ ಲೇ ಆಫ್‌ ಅಲೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ . ಈ ವರ್ಷ ಅಮೆರಿಕದ ಅನೇಕ ದೊಡ್ಡ ಕಂಪನಿಗಳಲ್ಲಿ ಲೇ ಆಫ್ ಮಾಡಲಾಗಿದೆ. ಈಗ ಜಪಾನ್‌ನ ಉದ್ಯೋಗಿಗಳ ಮೇಲೂ ಇದರ ಪರಿಣಾಮ ಬೀರುತ್ತಿದೆ. ಜಪಾನೀಸ್ ಕಂಪನಿ ತೋಷಿಬಾ ಕೂಡಾ ಲೇ ಆಫ್ ಶುರು ಮಾಡಿದೆ. ನಿಕ್ಕಿ ಏಷ್ಯಾದ ವರದಿಯ ಪ್ರಕಾರ ತೋಷಿಬಾ ಸುಮಾರು 5 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಹೊರಟಿದೆ. ಕಂಪನಿಯ ಈ ಲೇ ಆಫ್‌ ಯೋಜನೆ ದೇಶೀಯ ಮಾರುಕಟ್ಟೆಯ ಮೇಲೆ ಅಂದರೆ ಜಪಾನ್‌ನ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಂಪನಿ ವಜಾಗೊಳಿಸೋದಕ್ಕೆ ಹೊರಟಿರುವ ಉದ್ಯೋಗಿಗಳ ಸಂಖ್ಯೆ ಜಪಾನ್‌ನಲ್ಲಿನ ಕಂಪನಿಯ ಒಟ್ಟು ಉದ್ಯೋಗಿಗಳ ಶೇಕಡಾ 7 ಆಗಿದೆ. ಸುಮಾರು ಒಂದು ದಶಕದಲ್ಲೇ ತೋಷಿಬಾ ಇಷ್ಟು ದೊಡ್ಡ ಮಟ್ಟದಲ್ಲಿ ನೌಕರರ ವಜಾ ಮಾಡುತ್ತಿದೆ. ಈ ಹಿಂದೆ , 2015 ರಲ್ಲಿ ಕಂಪನಿಯಲ್ಲಿ ಆಡಿಟ್ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಾಗ ತೋಷಿಬಾ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿತ್ತು.

RBI ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆಯಿಲ್ಲ:
2024-25 ರ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿತದ ಬಗ್ಗೆ ಇನ್ನು ಭರವಸೆ ಇಟ್ಟುಕೊಳ್ಳುವಂತಿಲ್ಲ. ಮೋರ್ಗನ್ ಸ್ಟಾನ್ಲಿ ಅರ್ಥಶಾಸ್ತ್ರಜ್ಞರು ತಮ್ಮ ವರದಿಯಲ್ಲಿ ಈ ಮಾಹಿತಿ ಪ್ರಕಟಿಸಿದ್ದಾರೆ. ಚಿಲ್ಲರೆ ಹಣದುಬ್ಬರವು ಆರ್‌ಬಿಐನ 4 ಪರ್ಸೆಂಟ್‌ ಟಾಲರೆನ್ಸ್‌ ಮಟ್ಟಕ್ಕೆ ತಲುಪಿದ ನಂತರ ಬಡ್ಡಿದರ ಕಡಿತಗೊಳಿಸಬಹುದು ಎಂದು ಮೊದಲು ನಿರೀಕ್ಷಿಸಲಾಗಿತ್ತು . ಆದರೆ ಅಂತಹ ಯಾವುದೇ ನಿರೀಕ್ಷೆ ಇಲ್ಲ ಎಂದು ಮೋರ್ಗನ್ ಸ್ಟಾನ್ಲಿ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಮಾರ್ಗನ್ ಸ್ಟಾನ್ಲಿ ಅರ್ಥಶಾಸ್ತ್ರಜ್ಞರಾದ ಉಪಾಸನಾ ಚಾಚ್ರಾ ಮತ್ತು ಬಾನಿ ಗಂಭೀರ್ ಅವರು ಈ ಟಿಪ್ಪಣಿಯನ್ನು ಸಿದ್ಧಪಡಿಸಿದ್ದಾರೆ. ಪ್ರಾಡಕ್ಟಿವಿಟಿ ಗ್ರೋತ್‌ನಲ್ಲಿ ಸುಧಾರಣೆ, ಹೂಡಿಕೆ ಪ್ರಮಾಣ ಹೆಚ್ಚಳ, ಹಣದುಬ್ಬರ ದರ 4 ಪರ್ಸೆಂಟ್‌ಗಿಂತ ಹೆಚ್ಚಿರುವುದು ಮತ್ತು ಹೆಚ್ಚಿನ ಟರ್ಮಿನಲ್ ಫೆಡ್ ಫಂಡ್ ರೇಟ್‌ನಿಂದ ಬಡ್ಡಿದರ ಹೆಚ್ಚಳದಲ್ಲೇ ಇರಬೇಕು ಎಂದು ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, 2024-2025ರಲ್ಲಿ RBI ತನ್ನ ಪಾಲಿಸಿ ರೇಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಮತ್ತು RBI ರೆಪೋ ದರ 6.5 ಶೇಕಡಾದಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ನೆಸ್ಲೆ ನಂತರ, ಈ ಬ್ರ್ಯಾಂಡ್‌ನ ‘ಫಿಶ್ ಕರಿ ಮಸಾಲಾ’ ಬಗ್ಗೆ ಶಂಕೆ
ನೆಸ್ಲೆ ನಂತರ , ಈಗ ಎವರೆಸ್ಟ್‌ನ ಫಿಶ್ ಕರಿ ಮಸಾಲಾ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭಾರತದಿಂದ ಆಮದು ಮಾಡಿಕೊಂಡ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಮಾರುಕಟ್ಟೆಯಿಂದ ಹಿಂಪಡೆಯುವುದಾಗಿ ಸಿಂಗಾಪುರ ಘೋಷಿಸಿದೆ . ಮಸಾಲೆಯಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಎಥಿಲೀನ್ ಆಕ್ಸೈಡ್ ಇದೆ ಎಂದು ಆರೋಪಿಸಿ ಅದನ್ನು ಹಿಂಪಡೆಯಲಾಗುತ್ತಿದೆ. ಹಾಂಗ್ ಕಾಂಗ್‌ನ ಆಹಾರ ಸುರಕ್ಷತಾ ಕೇಂದ್ರವು ಹೊರಡಿಸಿದ ಅಧಿಸೂಚನೆಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಎಥಿಲೀನ್ ಆಕ್ಸೈಡ್ ಅನ್ನು ಸಾಮಾನ್ಯವಾಗಿ ಕೀಟನಾಶಕವಾಗಿ ಬಳಸಲಾಗುತ್ತದೆ , ಇದನ್ನು ಆಹಾರ ಉತ್ಪನ್ನಗಳಲ್ಲಿ ಬಳಸಲು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಿಂಗಾಪುರ್ ಫುಡ್ ಏಜೆನ್ಸಿ (SFA) ಹೇಳುವಂತೆ ಸಿಂಗಾಪುರ ನಿಯಮಗಳ ಪ್ರಕಾರ, ಮಸಾಲೆಗಳ ಬಾಳಿಕೆ ಅವಧಿಯನ್ನು ಹೆಚ್ಚಿಸಲು ಈ ಎಥಿಲೀನ್ ಆಕ್ಸೈಡ್ ಬಳಕೆಯನ್ನು ಅನುಮತಿಸಲಾಗಿದ್ದರೂ, ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಅದರ ಪ್ರಮಾಣ ಹೆಚ್ಚಿದೆ. ಇದರಿಂದ, ಗ್ರಾಹಕರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾಗಿದೆ.

2050 ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ 34 ಕೋಟಿಗೆ ಏರಿಕೆ
ರಿಯಲ್ ಎಸ್ಟೇಟ್ ಕಂಪನಿ CBRE, ಭಾರತದಲ್ಲಿನ ವೃದ್ಧರ ಜನಸಂಖ್ಯೆಯ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2025 ರ ವೇಳೆಗೆ, ಭಾರತದಲ್ಲಿ ವಿಶ್ವದ ಶೇಕಡಾ 17 ರಷ್ಟು ವೃದ್ಧರು ಇರುತ್ತಾರೆ ಎಂದು ಹೇಳಲಾಗಿದೆ. 2050 ರ ವೇಳೆಗೆ, ಭಾರತದಲ್ಲಿ ಹಿರಿಯರ ಸಂಖ್ಯೆ ಪ್ರಸ್ತುತ ಮಟ್ಟಕ್ಕಿಂತ 254 ಪರ್ಸೆಂಟ್ ಹೆಚ್ಚಾಗುತ್ತದೆ. ಅವರ ಒಟ್ಟು ಜನಸಂಖ್ಯೆ ಸುಮಾರು 34 ಕೋಟಿ ಆಗಲಿದೆ. ಭಾರತದಲ್ಲಿ ಹಿರಿಯ ಆರೈಕೆ ಮಾಡುವ ಅಗತ್ಯವನ್ನು ಅಂದಾಜು ಮಾಡಬೇಕಾಗಿದೆ ಎಂಬ ಕಾರಣಕ್ಕೆ CBRE ಈ ವರದಿಯನ್ನು ತಯಾರಿಸಿದೆ ಎಂದು ಭಾರತೀಯ ಮುಖ್ಯಸ್ಥ ಅಂಶುಮಾನ್ ಮ್ಯಾಗಜೀನ್ ಹೇಳಿದ್ದಾರೆ. ಕಳೆದ ದಶಕದಲ್ಲಿ, ಹಿರಿಯ ಜೀವನಕ್ಕೆ ಸಂಬಂಧಿಸಿದ ಪ್ಲಾನ್‌ಗಳ ಬೇಡಿಕೆಯಲ್ಲಿ ಭಾರಿ ಏರಿಲೆ ಕಂಡುಬಂದಿದೆ. ಹಿರಿಯ ನಾಗರಿಕರಿಗೆ ವಿಶೇಷ ಸೇವೆ ಮತ್ತು ಜೀವನಶೈಲಿಯನ್ನು ಒದಗಿಸುವ ಸೌಲಭ್ಯವನ್ನು ರೂಪಿಸುವಲ್ಲಿ ಡೆವಲಪರ್‌ಗಳು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.

ಮಾರ್ಚ್‌ನಲ್ಲಿ 31.30 ಲಕ್ಷ ಹೊಸ ಡಿಮ್ಯಾಟ್ ಖಾತೆ ಓಪನ್
ಮಾರ್ಚ್ 2024 ರ ವೇಳೆಗೆ ದೇಶದ ಡಿಮ್ಯಾಟ್ ಖಾತೆಗಳ ಸಂಖ್ಯೆ 15.138 ಕೋಟಿಗೆ ಏರಿದೆ. CDSL ಮತ್ತು NSDL ಅಂಕಿಅಂಶಗಳ ಪ್ರಕಾರ, ಮಾರ್ಚ್ 2024 ರಲ್ಲಿ 31.30 ಲಕ್ಷ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ . ಫೆಬ್ರವರಿ ಅಂತ್ಯಕ್ಕೆ ಈ ಸಂಖ್ಯೆ 14.825 ಕೋಟಿಗಳಷ್ಟಿತ್ತು. 2023-24 ರ ಆರ್ಥಿಕ ವರ್ಷದಲ್ಲಿ ಒಟ್ಟು 3.69 ಕೋಟಿ ಹೊಸ ಖಾತೆಗಳನ್ನು ತೆರೆಯಲಾಗಿದೆ . ಈ ಹೆಚ್ಚಳದ ದರವನ್ನು ಗಮನಿಸಿದರೆ, ಕಳೆದ ಹಣಕಾಸು ವರ್ಷದ ಪ್ರತಿ ತಿಂಗಳು ಸುಮಾರು 30.70 ಲಕ್ಷ ಹೊಸ ಡಿಮ್ಯಾಟ್ ಖಾತೆ ಓಪನ್ ಆಗಿದೆ. 2022-23 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು 32.25% ಹೆಚ್ಚಳವಾಗಿದೆ. ಮಾರ್ಚ್ 2023 ರ ಹೊತ್ತಿಗೆ, ದೇಶಾದ್ಯಂತ 11.45 ಕೋಟಿ ಡಿಮ್ಯಾಟ್ ಖಾತೆಗಳಿದ್ದವು. ಡಿಮ್ಯಾಟ್ ಖಾತೆಗಳ ಸಂಖ್ಯೆಯಲ್ಲಿನ ಹೆಚ್ಚಳದ ಹಿಂದಿನ ಕಾರಣ… ಷೇರು ಮಾರುಕಟ್ಟೆಯಲ್ಲಿ ಏರಿಕೆ ಆಗ್ತಾ ಇರೋದು, ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಸರ್ಕಾರವೇ ಮುಂದುವರಿಯುತ್ತದೆ ಎಂಬ ನಿರೀಕ್ಷೆ ಮತ್ತು ದೇಶದ ಜಿಡಿಪಿಯ ಬೆಳವಣಿಗೆಯ ನಿರೀಕ್ಷೆ…

ಎರಡು ತಿಂಗಳಲ್ಲಿ ಚಿನ್ನದ ಬೆಲೆ 11000 ರೂ.ಗೂ ಹೆಚ್ಚಳ
ಕಳೆದ ಎರಡು ತಿಂಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಚಿನ್ನದ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ, ಎರಡು ತಿಂಗಳೊಳಗೆ 11 ಸಾವಿರ ರೂ. ಏರಿಕೆಯಾಗಿದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಫೆಬ್ರವರಿ 23 ರಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ.ಗೆ 62,000 ರೂಪಾಯಿ ಇತ್ತು. ಏಪ್ರಿಲ್ 19 ರಂದು ಕೆಜಿಗೆ 73,600 ರೂಪಾಯಿ ಆಗಿದೆ. ಅಂದರೆ, ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ 11,000 ರೂ. ಗೂ ಹೆಚ್ಚಿನ ಏರಿಕೆ ದಾಖಲಾಗಿದೆ. ಕಳೆದ ಎರಡು ತಿಂಗಳಲ್ಲಿ ಬೆಳ್ಳಿಯ ಬೆಲೆಯೂ ಭಾರಿ ಏರಿಕೆ ದಾಖಲಿಸಿದೆ. IBJA ಪ್ರಕಾರ, ಫೆಬ್ರವರಿ 23 ರಂದು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 69,653 ರೂಪಾಯಿ ಇತ್ತು. ಏಪ್ರಿಲ್ 19 ರಂದು ಬೆಳ್ಳಿ ಕೆಜಿಗೆ 83,450 ರೂ. ಗೆ ತಲುಪಿದೆ. ಅಂದರೆ, ಎರಡು ತಿಂಗಳೊಳಗೆ 13,797 ರೂ. ದುಬಾರಿಯಾಗಿದೆ.

ಮಹಿಂದ್ರಾ XUV3XO ದಲ್ಲಿ ರಿಮೋಟ್ ಕ್ಲೈಮ್ಯಾಟ್ ಕಂಟ್ರೋಲ್
ಮಹೀಂದ್ರಾ XUV3XO ಕಾರು ಏಪ್ರಿಲ್ 29 ರಂದು ಬಿಡುಗಡೆ ಆಗಲಿದೆ. ಇದು ಕನೆಕ್ಟೆಡ್ ಕಾರ್ ಟೆಕ್ನಾಲಜಿ ಮತ್ತು ಕ್ಲೈಮ್ಯಾಟ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನಿಂದಲೇ AC ನಿಯಂತ್ರಿಸಬಹುದು. ಇದರಿಂದ, ಗ್ರಾಹಕರು ಕಾರಿನಲ್ಲಿ ಕುಳಿತುಕೊಳ್ಳುವ ಮೊದಲು ಕ್ಯಾಬಿನ್ ಅನ್ನು ಕೂಲ್ ಮಾಡಿಡಬಹುದು. ಈ ಕಾರು ಮಹೀಂದ್ರ XUV300 ಫೇಸ್‌ಲಿಫ್ಟ್ ಆಗಿದ್ದು, ಇದಕ್ಕೆ XUV3XO ಹೆಸರಿಡಲಾಗಿದೆ. XUV3XO ಎಕ್ಸ್ ಶೋರೂಂ ಬೆಲೆ 9 ಲಕ್ಷದಿಂದ ಪ್ರಾರಂಭವಾಗಬಹುದು. ಈ ವಿಭಾಗದಲ್ಲಿ, ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಫ್ರಂಟ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟ್ಯಾಗರ್‌ ಜೊತೆಗೆ ಸ್ಪರ್ಧಿಸಲಿದೆ.

Published: April 19, 2024, 14:23 IST

ನೆಸ್ಲೆ ನಂತರ ಮತ್ತೊಂದು ಕಂಪನಿಗೆ ಸಂಕಷ್ಟ, ಈ ಫಿಶ್ ಕರಿ ತಿನ್ನಂಗಿಲ್ಲ!