ಕೊನೆಗೂ ಬಂತು BSNL 4G, ಹೊಸ ದಾಖಲೆ ಬರೆದ TATA ಪಂಚ್..!

ದೇಶದ ಅತಿ ದೊಡ್ಡ ಕಾರು ಕಂಪನಿ ಮಾರುತಿ ಸುಜುಕಿ ಇದೀಗ ಅತ್ಯಂತ ಜನಪ್ರಿಯ ಕಾರು ಎಂಬ ಬಿರುದನ್ನು ಕಳೆದುಕೊಂಡಿದೆ. ಟಾಟಾ ಮೋಟಾರ್ಸ್ ಈ ರೇಸ್‌ನಲ್ಲಿ ಗೆದ್ದಿದೆ.

alternate

ಭಾರತದ GDP 7.1 ಶೇಕಡಾ ವೇಗದಲ್ಲಿ ಬೆಳವಣಿಗೆ
ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ಅಂದರೆ Ind-Ra ಭಾರತದ ಜಿಡಿಪಿಯ ಅಂದಾಜುಗಳನ್ನು ಹೆಚ್ಚಿಸಿದೆ. ಇಂಡಿಯಾ ರೇಟಿಂಗ್ಸ್ ಪ್ರಕಾರ, ದೇಶದ GDP 2025 ರ ಹಣಕಾಸು ವರ್ಷದಲ್ಲಿ 7.1 ಪರ್ಸೆಂಟ್ ವೇಗದಲ್ಲಿ ಬೆಳೆಯುತ್ತದೆ. ಇಂಡಿಯಾ ರೇಟಿಂಗ್ಸ್ನ ಈ ಅಂದಾಜು ಭಾರತೀಯ ರಿಸರ್ವ್ ಬ್ಯಾಂಕ್‌ಗಿಂತ ಹೆಚ್ಚಾಗಿದೆ. ಜಿಡಿಪಿ ಶೇ.7 ವೇಗದಲ್ಲಿ ಬೆಳೆಯಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಸರ್ಕಾರಿ ಮತ್ತು ಖಾಸಗಿ ಹೂಡಿಕೆಯ ಸಹಾಯದಿಂದ ಈ ವೇಗದಲ್ಲಿ ಬೆಳವಣಿಗೆ ಕಾಣಲಿದೆ ಎಂದು ರೇಟಿಂಗ್ ಏಜೆನ್ಸಿ ಸೋಮವಾರ ಹೇಳಿದೆ. ಇಂಡಿಯಾ ರೇಟಿಂಗ್ಸ್ ತನ್ನ ಹಿಂದಿನ ವರದಿಯಲ್ಲಿ ಭಾರತದ ಜಿಡಿಪಿ ಶೇಕಡಾ 6.5 ರ ದರದಲ್ಲಿ ಬೆಳೆಯುತ್ತದೆ ಎಂದು ಅಂದಾಜಿಸಿತ್ತು. ಆರ್ಥಿಕತೆಯಲ್ಲಿ ಸಕಾರಾತ್ಮಕ ಸಂಕೇತಗಳಿದ್ದರೂ, ದೇಶೀಯ ಬಳಕೆ ಮತ್ತು ರಫ್ತು ವಲಯ ಎದುರಿಸುತ್ತಿರುವ ಸಮಸ್ಯೆಗಳು ಹಲವು ಅಡೆತಡೆಗಳನ್ನು ಎದುರಿಸಬಹುದು ಎಂದು ಹೇಳಿದೆ. ಹಣದುಬ್ಬರ ಮತ್ತು ವಿಶ್ವದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಕೂಡ ರಫ್ತು ವಲಯಕ್ಕೆ ಸವಾಲಾಗಿದೆ.

HPCL ಷೇರುದಾರರಿಗೆ ಬೋನಸ್ ಷೇರು – ಮೇ 9 ರಂದು ನಿರ್ಧಾರ
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ HPCL ಹೂಡಿಕೆದಾರರಿಗೆ ಇಲ್ಲೊಂದು ಒಳ್ಳೆಯ ಸುದ್ದಿ ಇದೆ. ಕಂಪನಿ ಮೇ 9 ರಂದು ಆಡಳಿತ ಮಂಡಳಿ ಸಭೆಯನ್ನು ನಡೆಸುತ್ತಿದ್ದು, ಇದರಲ್ಲಿ ಬೋನಸ್ ಷೇರುಗಳನ್ನು ಕೊಡುವ ಬಗ್ಗೆ ನಿರ್ಧಾರ ಮಾಡಲಾಗುವುದು. ಅನುಮತಿ ಸಿಕ್ಕರೆ, ಕಳೆದ ಏಳು ವರ್ಷಗಳಲ್ಲಿ ಷೇರುದಾರರಿಗೆ ಕಂಪನಿ ನೀಡಿದ ಮೊದಲ ಬೋನಸ್ ಇದಾಗಿರಲಿದೆ. ಆದರೆ, ಬೋನಸ್ ನೀಡುವ ರೆಕಾರ್ಡ್‌ ಡೇಟ್‌ ಇನ್ನೂ ನಿಗದಿಯಾಗಿಲ್ಲ. ಇದಕ್ಕೂ ಮೊದಲು, HPCL 2016 ರಲ್ಲಿ 2:1 ರ ರೇಶಿಯೋದಲ್ಲಿ ಬೋನಸ್ ಷೇರು ಕೊಟ್ಟಿತ್ತು. ಅಂದರೆ, ಪ್ರತಿ ಒಂದು ಷೇರಿಗೆ ಎರಡು ಉಚಿತ ಷೇರುಗಳನ್ನು ಕೊಟ್ಟಿತ್ತು. 2017 ರಲ್ಲೂ 1:2 ಅನುಪಾತದಲ್ಲಿ ಬೋನಸ್ ಷೇರು ಕೊಟ್ಟಿತ್ತು.

ಎನ್‌ಆರ್‌ಐಗಳಿಗೆ ಇಂಟರ್‌ನ್ಯಾಷನಲ್ ನಂಬರ್‌ನಿಂದಲೂ ಯುಪಿಐ ಪೇಮೆಂಟ್ ಅವಕಾಶ
ಭಾರತದಲ್ಲಿ ಅನಿವಾಸಿ ಭಾರತೀಯರಿಗೆ ಒಂದು ಮಹತ್ವದ ಸುದ್ದಿ ಇದು. ಈಗ NRI ಗಳು ಇಂಟರ್‌ನ್ಯಾಷನಲ್ ನಂಬರ್‌ನಿಂದಲೂ UPI ಪೇಮೆಂಟ್ಸ್ ಮಾಡಬಹುದು. ICICI ಬ್ಯಾಂಕ್ ಈ ಅವಕಾಶ ಕಲ್ಪಿಸಿದೆ. ICICI ಬ್ಯಾಂಕ್‌ನ NRI ಗ್ರಾಹಕರು ತಮ್ಮ ಯುಟಿಲಿಟಿ ಬಿಲ್‌ಗಳನ್ನು ತಮ್ಮ NRI/NRO ಬ್ಯಾಂಕ್ ಖಾತೆಯಲ್ಲಿ ನೋಂದಾಯಿಸಿರುವ ಇಂಟರ್‌ನ್ಯಾಷನಲ್ ನಂಬರ್ ಬಳಸಿಕೊಂಡು ಭಾರತದಲ್ಲಿನ ಬ್ಯಾಂಕ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರಂಗಳಿಗೆ ಪೇಮೆಂಟ್ಸ್ ಮಾಡಬಹುದು … ಮೊದಲು, NRI ಗಳಿಗೆ ಭಾರತೀಯ ಮೊಬೈಲ್ ಸಂಖ್ಯೆಯೇ ಬೇಕಾಗಿತ್ತು. ಈಗ, ಅವರು ICICI iMobile Pay ಮೊಬೈಲ್ ಬ್ಯಾಂಕಿಂಗ್ ಆಪ್‌ ಮೂಲಕ UPI ಪೇಮೆಂಟ್ಸ್ ಮಾಡುವಾಗ, ಇಂಟರ್‌ನ್ಯಾಷನಲ್ ನಂಬರ್ ಕೂಡ ಬಳಸಬಹುದು. ಬ್ಯಾಂಕ್ ಈ ಸೌಲಭ್ಯವನ್ನು 10 ದೇಶಗಳಲ್ಲಿ ಪ್ರಾರಂಭಿಸಿದೆ, USA, UK, UAE, ಕೆನಡಾ, ಸಿಂಗಾಪುರ, ಆಸ್ಟ್ರೇಲಿಯಾ, ಹಾಂಕಾಂಗ್, ಓಮನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲಿ ಈ ಸೌಲಭ್ಯವಿದೆ. ಬ್ಯಾಂಕಿನ NRI ಗ್ರಾಹಕರು ಈಗ ಯಾವ ಭಾರತೀಯ QR ಕೋಡ್ ಅನ್ನು ಬೇಕಾದರೂ ಸ್ಕ್ಯಾನ್ ಮಾಡಿ UPI ಪೇಮೆಂಟ್ ಮಾಡಬಹುದು.

ಆಗಸ್ಟ್ ನಿಂದ ದೇಶಾದ್ಯಂತ BSNL 4G
ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ BSNL ಈ ವರ್ಷದ ಆಗಸ್ಟ್‌ನಿಂದ ದೇಶಾದ್ಯಂತ 4G ಸೇವೆಯನ್ನು ಪ್ರಾರಂಭಿಸಲಿದೆ. BSNL ನ ಈ ಸೇವೆ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನವನ್ನು ಆಧರಿಸಿರುತ್ತದೆ. ಈ ಸ್ವದೇಶಿ ತಂತ್ರಜ್ಞಾನವನ್ನು ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತು ಟೆಲಿಕಾಂ ರಿಸರ್ಚ್ ಆರ್ಗನೈಸೇಶನ್ C-DoT (C-DoT) ಸಹಭಾಗಿತ್ವದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಳಸಿಕೊಂಡು BSNL ಪಂಜಾಬ್‌ನಲ್ಲಿ 4G ಸೇವೆಯನ್ನು ಪ್ರಾರಂಭಿಸಿದ್ದು, ಸುಮಾರು 8 ಲಕ್ಷ ಗ್ರಾಹಕರು ಬಳಸುತ್ತಿದ್ದಾರೆ. BSNL ಅಧಿಕಾರಿಗಳು 4G ನೆಟ್‌ವರ್ಕ್‌ನಲ್ಲಿ ಸೆಕೆಂಡಿಗೆ 40-45 MB ಗರಿಷ್ಠ ವೇಗ ಸಿಗುತ್ತದೆ ಎಂದು ಹೇಳಿದ್ದಾರೆ. ಪ್ರಾಯೋಗಿಕ ಹಂತದಲ್ಲಿ 700 ಮೆಗಾಹರ್ಟ್ಜ್ (Mhz) ಪ್ರೀಮಿಯಂ ಸ್ಪೆಕ್ಟ್ರಮ್ ಬ್ಯಾಂಡ್‌ನಲ್ಲಿ ಮತ್ತು 2,100 MHz ಬ್ಯಾಂಡ್‌ನಲ್ಲಿ ಪ್ರಾರಂಭಿಸಲಾಗಿದೆ.

ಟೆಸ್ಲಾದಲ್ಲಿ ಮತ್ತೆ ವಜಾ ಪರ್ವ
ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾದಲ್ಲಿ ನೌಕರರ ಲೇ ಆಫ್‌ ಪರ್ವ ಮುಗಿಯುವ ಹಾಗೆ ತೋರುತ್ತಿಲ್ಲ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ತಮ್ಮ ಕಂಪನಿಯ ಜಾಗತಿಕ ಉದ್ಯೋಗಿಗಳಲ್ಲಿ 10 ಪರ್ಸೆಂಟ್ ನೌಕರರನ್ನು ವಜಾಗೊಳಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಆದರೆ, ಈಗ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಸುಮಾರು 20 ಪರ್ಸೆಂಟ್‌ ಟೆಸ್ಲಾ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಅನೇಕ ವರದಿಗಳು ಹೇಳಿವೆ. ಈ ವಾರಾಂತ್ಯದಲ್ಲಿ, ಟೆಸ್ಲಾ ಇನ್ನೂ ಕೆಲವು ಉದ್ಯೋಗಿಗಳಿಗೆ ಲೇ ಆಫ್‌ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ… ಕಳೆದ ತಿಂಗಳು, ಟೆಸ್ಲಾ ತನ್ನ EV ಚಾರ್ಜಿಂಗ್ ವಿಭಾಗವನ್ನು ಕ್ಲೋಸ್ ಮಾಡಿತ್ತು. ಕಂಪನಿಯು ಸುಮಾರು 500 ಜನರ ತಂಡದ ಜೊತೆಗೆ ಇಬ್ಬರು ಹಿರಿಯ ಅಧಿಕಾರಿಗಳಿಗೆ ಮನೆ ದಾರಿ ತೋರಿಸಿದೆ. ಟೆಕ್ಸಾಸ್, ಕ್ಯಾಲಿಫೋರ್ನಿಯಾ, ನೆವಾಡಾ ಮತ್ತು ನ್ಯೂಯಾರ್ಕ್‌ನಲ್ಲಿರುವ ಕಚೇರಿಗಳಿಂದ ಸುಮಾರು 6700 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಟೆಸ್ಲಾ ಕಳೆದ ತಿಂಗಳು ಹೇಳಿದೆ.

ಇನ್ನು ಮುಂದೆ ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರು ಮಾರುತಿಯದ್ದಲ್ಲ
ದೇಶದ ಅತಿ ದೊಡ್ಡ ಕಾರು ಕಂಪನಿ ಮಾರುತಿ ಸುಜುಕಿ ಇದೀಗ ಅತ್ಯಂತ ಜನಪ್ರಿಯ ಕಾರು ಎಂಬ ಬಿರುದನ್ನು ಕಳೆದುಕೊಂಡಿದೆ. ಟಾಟಾ ಮೋಟಾರ್ಸ್ ಈ ರೇಸ್‌ನಲ್ಲಿ ಗೆದ್ದಿದೆ. ಭಾರತೀಯ ಕಾರು ಉದ್ಯಮದಲ್ಲಿನ ಅತಿ ದೊಡ್ಡ ಸ್ಥಿತ್ಯಂತರದಲ್ಲಿ ಇದು ಮಹತ್ವದ್ದು. ಟಾಟಾದ ಮಿನಿ SUV ಪಂಚ್ ದೇಶದ ಅತಿ ಹೆಚ್ಚು ಮಾರಾಟವಾಗುವ ಮಾಡೆಲ್ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಮಾರುತಿಯ ಜನಪ್ರಿಯ ಮಾಡೆಲ್‌ಗಳಾದ ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬ್ರೆಝಾವನ್ನು ಹಿಂದಿಕ್ಕಿದೆ. ಮಾರ್ಚ್ 2024 ರಲ್ಲಿ ಪಂಚ್ ಮೊದಲ ಬಾರಿಗೆ ಈ ಸಾಧನೆ ಮಾಡಿದೆ. ಮಾರ್ಚ್‌ನಲ್ಲಿ ಒಟ್ಟು 17,547 ಯೂನಿಟ್ ಪಂಚ್‌ ಮಾರಾಟವಾಗಿದ್ದರೆ, ವ್ಯಾಗನ್‌ಆರ್ 16,368 ಯುನಿಟ್‌ ಮಾರಾಟವಾಗಿದೆ. ವ್ಯಾಗನ್‌ಆರ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಎರಡನೇ ಸ್ಥಾನದಲ್ಲಿ ಹುಂಡೈನ SUV ಕ್ರೆಟಾ ಎರಡನೇ ಸ್ಥಾನದಲ್ಲಿದ್ದು, ಒಟ್ಟು 16,458 ಯುನಿಟ್ ಮಾರಾಟವಾಗಿದೆ.

Published: May 7, 2024, 20:12 IST

ಕೊನೆಗೂ ಬಂತು BSNL 4G, ಹೊಸ ದಾಖಲೆ ಬರೆದ TATA ಪಂಚ್..!