ರಾಮ್​ದೇವ್ ಗ್ರಹಚಾರ ಬಿಡಿಸಿದ ಸುಪ್ರೀಂ ಕೋರ್ಟ್!

ಯಾವ ರೀತಿಯಲ್ಲಿ, ಯಾವ ಗಾತ್ರದಲ್ಲಿ ಪತಂಜಲಿಯ ಜಾಹೀರಾತು ಮುದ್ರಣ ಮಾಡಿದ್ದಿರೋ ಅದೇ ಗಾತ್ರದಲ್ಲಿ ಕ್ಷಮೆ ಕೇಳಬೇಕು ಎಂದು ಕೋರ್ಟ್ ತಿಳಿಸಿತು. ಈಗ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಣ್ಣ ಗಾತ್ರದ ಕ್ಷಮಾಪಣೆ ಯಾವುದಕ್ಕೂ ಸಾಲದು ಎಂದು ಕೋರ್ಟ್ ಹೇಳಿತು.

ರಾಮ್​ದೇವ್ ಗ್ರಹಚಾರ ಬಿಡಿಸಿದ ಸುಪ್ರೀಂ ಕೋರ್ಟ್!

ನವದೆಹಲಿ (ಏ. 24) ಬಾಬಾ ರಾಮ್ ದೇವ್ ಪತಂಜಲಿ ಸಂಸ್ಥೆಯ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಹತ್ವದ ಮಾತುಗಳನ್ನಾಡಿದೆ. ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಕ್ಷಮೆ ಯಾಚನೆ ಪತ್ರದ ಜಾಹಿರಾತನ್ನು ಕಡತಗಳಿಗೆ ಸೇರಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪತಂಜಲಿ ಆಯುರ್ವೇದ ಲಿಮಿಟೆಡ್‌ನ ದಾರಿತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ನಡೆಯಿತು. ಕಂಪನಿ ಸಂಸ್ಥಾಪಕ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಆಚಾರ್ಯ ಅವರ ಪರವಾಗಿ ಬೇಷರತ್ ಕ್ಷಮೆಯಾಚಿಸುವ ಕ್ಷಮಾಪಣೆ ಪತ್ರವನ್ನು ಮುದ್ರಿಸಲಾಗಿದೆ ಎಂದು ಅವರ ಪರವಾಗಿ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದರು.

ಈ ಹಿಂದೆ ಪತಂಜಲಿ ಸಂಸ್ಥೆಯ ಉಭಯ ಮುಖ್ಯಸ್ಥರು ಸಲ್ಲಿಸಿದ್ದ ಬೇಷರತ್ ಕ್ಷಮೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಅವರಿಗೆ ಛೀಮಾರಿ ಹಾಕಿತ್ತು. ಆದರೆ ಇದೀಗ ಬಾಬಾ ರಾಮ್ ದೇವ್ ಪತ್ರಿಕೆಗಳಲ್ಲಿ ತಮ್ಮ ಕ್ಷಮಾಪಣೆ ಪತ್ರವನ್ನು ಮುದ್ರಿಸಿರುವುದಾಗಿ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ವಾದವನ್ನು ಆಲಿಸಿದ ಕೋರ್ಟ್ ರಾಮ್ ದೇವ್ ಅವರ ಕ್ಷಮೆ ಜಾಹಿರಾತನ್ನು ಕಡತಗಳಿಗೆ ಸೇರಿಸುವಂತೆ ಸೂಚನೆ ನೀಡಿದೆ.

ಯಾವ ರೀತಿ ಜಾಹೀರಾತು ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಕ್ಷಮೆ ಕೇಳಿ!
ಯಾವ ರೀತಿಯಲ್ಲಿ, ಯಾವ ಗಾತ್ರದಲ್ಲಿ ಪತಂಜಲಿಯ ಜಾಹೀರಾತು ಮುದ್ರಣ ಮಾಡಿದ್ದಿರೋ ಅದೇ ಗಾತ್ರದಲ್ಲಿ ಕ್ಷಮೆ ಕೇಳಬೇಕು ಎಂದು ಕೋರ್ಟ್ ತಿಳಿಸಿತು. ಈಗ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಣ್ಣ ಗಾತ್ರದ ಕ್ಷಮಾಪಣೆ ಯಾವುದಕ್ಕೂ ಸಾಲದು ಎಂದು ಕೋರ್ಟ್ ಹೇಳಿತು.

ಸರ್ಕಾರಗಳು, ಮಾಧ್ಯಮಗಳು ಸಹ ದಾರಿ ತಪ್ಪಿವೆ. ಮಾಧ್ಯಮವೊಂದರಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಒಂದು ಕಡೆ ಪತಂಜಲಿ ಪ್ರಕರಣ ಏನಾಯಿತು? ಎಂದು ಪ್ರಶ್ನೆ ಮಾಡುತ್ತಿದ್ದರೆ ಇನ್ನೊಂದು ಕಡೆ ಅದೇ ಕಾರ್ಯಕ್ರಮದಲ್ಲಿ ಪತಂಜಲಿಯ ಜಾಹೀರಾತು ಪ್ರಸಾರ ಆಗುತ್ತದೆ ಇದು ಎಂತಹ ಪರಿಸ್ಥಿತಿ ಎಂದು ಕೋರ್ಟ್ ಪ್ರಶ್ನೆ ಮಾಡಿತು.

ಪತಂಜಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರ್ಕಾರ ಹೇಗೆ ಪತ್ರ ಬರೆಯಿತು ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಂತಹ ಕಾನೂನುಗಳ ಅನುಷ್ಠಾನವನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ತಿಳಿಸಿತು.

ಒಟ್ಟಿನಲ್ಲಿ ಈ ಪ್ರಕರಣ ಔಷಧ ವಲಯಕ್ಕೆ ಮಹತ್ವದ ಸೂಚನೆ ನೀಡಿರುವುದು ಸತ್ಯ. ರೋಗ ಗುಣ ಮಾಡುತ್ತೇವೆ, ಚಿಟಿಕೆ ಔಷಧ ಎಲ್ಲದಕ್ಕೂ ರಾಮಬಾಣ… ಹೀಗೆ ನೂರಾರು ತಂತ್ರ ಬಳಸಿ ಜನರನ್ನು, ಮಕ್ಕಳನ್ನು, ವೃದ್ಧರನ್ನು ದಾರಿ ತಪ್ಪಿಸುವ, ತಪ್ಪು ಸಂದೇಶ ನೀಡುವ, ಮೀಸ್ ಲೀಡ್ ಮಾಡುವ ಜಾಹೀರಾತುಗಳನ್ನು ನೀಡಿದರೆ ಕಠಿಣ ಕ್ರಮ ಅನುಸರಿಸಬೇಕಾಗುತ್ತದೆ ಎನ್ನುವ ಸೂಚನೆ ಎಲ್ಲ ಕಂಪನಿಗಳು ಈಗ ಸಿಕ್ಕಂತಾಗಿದೆ.

Published: April 24, 2024, 16:32 IST