ರಾಷ್ಟ್ರೀಯ ಪಿಂಚಣಿ ಪದ್ಧತಿ, ನ್ಯಾಷನಲ್ ಪೆನ್ಷನ್ ಸ್ಕೀಂ ಅಥವಾ ಎನ್ ಪಿ ಎಸ್ ಮತ್ತು ಈಕ್ವಿಟಿ ಮ್ಯೂಚುಯಲ್ ಫಂಡ್ ಎರಡೂ ಕೂಡ ದೀರ್ಘಾವಧಿ ಹೂಡಿಕೆಗಳು. ಎನ್ ಪಿ ಎಸ್ ಮತ್ತು ಮ್ಯೂಚುಯಲ್ ಫಂಡ್ ಗಳ ನಡುವೆ ಯಾವುದರಲ್ಲಿ ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ಜನರಿಗೆ ಸಾಮಾನ್ಯವಾಗಿ ಗೊಂದಲ ಇರುತ್ತದೆ. ಯಾವುದು ಉತ್ತಮ? ಎನ್ ಪಿ ಎಸ್ ಅಥವಾ ಈಕ್ವಿಟಿ ಮ್ಯೂಚುಯಲ್ ಫಂಡ್ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಎನ್ ಪಿ ಎಸ್ ಮತ್ತು ಈಕ್ವಿಟಿ ಮ್ಯೂಚುಯಲ್ ಫಂಡ್, ಎರಡಕ್ಕೂ ತಮ್ಮದೇ ಆದ ಅನುಕೂಲ, ಅನಾನುಕೂಲಗಳಿವೆ. ಯಾವ ಬಗೆಯ ಹೂಡಿಕೆದಾರರಿಗೆ ಯಾವ ಸ್ಕೀಂ ಸೂಕ್ತ ಎನ್ನುವುದನ್ನು ತಿಳಿದುಕೊಳ್ಳೋಣ.
ಪ್ರತಿ ಹೂಡಿಕೆಗೂ ಕೂಡ ಒಂದು ಉದ್ದೇಶ ಅಥವಾ ಗುರಿ ಇರುತ್ತದೆ. ಅಂದರೆ ನಿರ್ದಿಷ್ಟ ಉದ್ದೇಶ ಮನಸ್ಸಿನಲ್ಲಿಟ್ಟಿಕೊಂಡು ಹೂಡಿಕೆ ಮಾಡುವುದು. ಎನ್ ಪಿ ಎಸ್ ಎನ್ನುವುದು ನಿವೃತ್ತಿಗೆ ಗಮನಹರಿಸುವ ದೀರ್ಘಾವಧಿ ಹೂಡಿಕೆಯಾಗಿದೆ. ನಿವೃತ್ತಿ ನಂತರ ನಿಯಮಿತ ಆದಾಯ ತರುವಂತೆ ಇದನ್ನು ರೂಪಿಸಲಾಗಿದೆ. ಈಕ್ವಿಟಿ ಮ್ಯೂಚುಯಲ್ ಫಂಡ್ ಗಳನ್ನು ವಿವಿಧ ದೀರ್ಘಾವಧಿ ಹಣಕಾಸು ಗುರಿಗಳಿಗೆ ಅಂದರೆ ಸಂಪತ್ತು ಸೃಷ್ಟಿ, ನಿವೃತ್ತಿ, ಮಕ್ಕಳ ವಿದ್ಯಾಭ್ಯಾಸ, ವಿವಾಹ ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಬಳಸಬಹುದು. ಅಲ್ಪಾವಧಿ ಗುರಿಗಳಿಗೆ, ಡೆಟ್ ಮ್ಯೂಚುಯಲ್ ಫಂಡ್ ಗಳು ಸೂಕ್ತ.
ಎನ್ ಪಿ ಎಸ್ ನಲ್ಲಿ ನಿಮ್ಮ ಹಣವನ್ನು ಬೇರೆ ಬೇರೆ ಅಸೆಟ್ ಕ್ಲಾಸ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈಕ್ವಿಟಿ, ಸರ್ಕಾರಿ ಬಾಂಡ್, ಕಾರ್ಪೊರೇಟ್ ಬಾಂಡ್, ಪರ್ಯಾಯ ಹೂಡಿಕೆ ಫಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರಸ್ತುತ ಎನ್ ಪಿ ಎಸ್ ಹೂಡಿಕೆದಾರರು, ಎರಡು ಹೂಡಿಕೆ ವಿಧಾನಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ಆಟೋ, ಇನ್ನೊಂದು ಆಕ್ಟಿವ್. ಈ ಎರಡು ವಿಧಾನಗಳಲ್ಲಿ ಹೂಡಿಕೆದಾರರು ತಮಗೆ ಯಾವ ವಿಧಾನ ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಆಕ್ಟಿವ್ ಆಯ್ಕೆ ಮಾಡಿಕೊಂಡರೆ ಎನ್ ಪಿ ಎಸ್ ಸಬ್ಸ್ಕ್ರೈಬ್ ಮಾಡಿರುವವರು ವಿವಿಧ ಅಸೆಟ್ ಕ್ಲಾಸ್ ಗಳಲ್ಲಿ ಎಷ್ಟೆಷ್ಟು ಹೂಡಿಕೆ ಹಂಚಿಕೆ ಎನ್ನುವುದರ ಶೇಕಡಾವಾರು ಹಂಚಿಕೆ ಮಾಡಬಹುದು. ಇನ್ನು ಆಟೋ ಚಾಯ್ಸ್ ಆಯ್ಕೆ ಮಾಡಿಕೊಂಡರೆ ನಿಮ್ಮ ವಯಸ್ಸನ್ನು ಆಧರಿಸಿ ಅಲೊಕೇಷನ್ ಆಟೊಮ್ಯಾಟಿಕ್ ಆಗಿ ಆಗುತ್ತದೆ.
ಈಕ್ವಿಟಿ ಮ್ಯೂಚುಯಲ್ ಫಂಡ್ ಗಳು ತಮ್ಮ ಅಸೆಟ್ ನ ಬಹುಪಾಲನ್ನು ವಿವಿಧ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಎಎಂಎಫ್ ಐ ಪ್ರಕಾರ, ಈ ಸ್ಕೀಂ ಗಳು ತಮ್ಮ ಅಸೆಟ್ ನ ಶೇಕಡ 65 ರಷ್ಟನ್ನು ಈಕ್ವಿಟಿ ಮತ್ತು ಈಕ್ವಿಟಿ ಸಂಬಂಧಿತ ಇನ್ಸ್ ಟ್ರುಮೆಂಟ್ ಗಳಲ್ಲಿ ಹೂಡಿಕೆ ಮಾಡಬೇಕು. ಈಕ್ವಿಟಿ ಮ್ಯೂಚುಯಲ್ ಫಂಡ್ ಗಳು ವಿವಿಧ ವಲಯಗಳು, ವಿವಿಧ ಥೀಮ್ ಗಳು ಮತ್ತು ಬೇರೆ ಬೇರೆ ಮಾರ್ಕೆಟ್ ಕ್ಯಾಪ್ ಗಳ ಅನೇಕ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ.
ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಿಗೆ ಹೋಲಿಸಿದರೆ ಎನ್ ಪಿ ಎಸ್ ಸುರಕ್ಷಿತ ಮತ್ತು ಕಡಿಮೆ ಏರಿಳಿತ ಕಾಣುತ್ತದೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಎನ್ ಪಿ ಎಸ್ ನಲ್ಲಿ ಈಕ್ವಿಟಿ, ಕಾರ್ಪೊರೇಟ್ ಬಾಂಡ್, ಗವರ್ನಮೆಂಟ್ ಬಾಂಡ್ ಅಂತಾ ಫಂಡ್ ಡೈವರ್ಸಿಫೈ ಆಗುತ್ತದೆ. ಆದರೆ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳು ಸಾಮಾನ್ಯವಾಗಿ ಬಹುತೇಕ ಈಕ್ವಿಟಿ ಷೇರುಗಳಲ್ಲೇ ಹೂಡಿಕೆ ಮಾಡುವುದರಿಂದ ಅನಿರೀಕ್ಷಿತ ಇಳಿಕೆಯ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವ ಆತಂಕ ಇದ್ದೇ ಇದೆ.
ಎನ್ ಪಿ ಎಸ್ ನ ಟೈಯರ್ – 1 ಖಾತೆಯಲ್ಲಿನ ಹೂಡಿಕೆಗೆ ಲಾಕ್ ಇನ್ ಪೀರಿಯಡ್ ಇರುತ್ತದೆ. ಅದು ನಿವೃತ್ತಿವರೆಗೂ ಇರುತ್ತದೆ. ಆದಾಗ್ಯೂ, ನಿರ್ದಿಷ್ಟ ಸಂದರ್ಭಗಳಲ್ಲಿ ಅಂದರೆ ವೈದ್ಯಕೀಯ ತುರ್ತು, ಶಿಕಷಣ ಮತ್ತು ವಿವಾಹ ವೆಚ್ಚಗಳಿಗಾಗಿ, ಎನ್ ಪಿ ಎಸ್ ಖಾತೆಯಿಂದ ಭಾಗಶಃ ಮೊತ್ತವನ್ನ ಹಿಂಪಡೆಯೋಕೆ ಅವಕಾಶ ಇದೆ. ಮತ್ತೊಂದೆಡೆ, ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ (ಇಎಲ್ಎಸ್ಎಸ್) ಹೊರತುಪಡಿಸಿದರೆ, ಬಹುತೇಕ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಲ್ಲಿ ಯಾವುದೇ ಲಾಕ್ ಇನ್ ಪೀರಿಯಡ್ ಇರೋದಿಲ್ಲ. ಇಎಲ್ಎಸ್ಎಸ್ ಗೆ ಮೂರು ವರ್ಷಗಳ ಲಾಕ್ ಇನ್ ಪೀರಿಯಡ್ ಇದೆ.
ನ್ಯಾಷನಲ್ ಪೆನ್ಷನ್ ಸ್ಕೀಂ ಅಥವಾ ಎನ್ ಪಿ ಎಸ್ಯನ್ನು ಸಾಮಾನ್ಯವಾಗಿ ಪಿಂಚಣಿ ಮತ್ತು ತೆರಿಗೆ ಉಳಿತಾಯದ ಉದ್ದೇಶಗಳಿಗೆ ಮೀಸಲಿಡಲಾಗತ್ತದೆ. ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿಸಿಡಿ 1(ಬಿ) ಅಡಿಯಲ್ಲಿ 50 ಸಾವಿರ ರೂಪಾಯಿವರೆಗೆ ವಿನಾಯಿತಿ ಸಿಗುತ್ತದೆ. ನೀವು ವೇತನ ಪಡೆಯುವವರಾಗಿದ್ದು, ನಿಮ್ಮ ಉದ್ಯೋಗದಾತರು ನಿಮ್ಮ ಪರವಾಗಿ ಎನ್ ಪಿ ಎಸ್ ಗೆ ಕೊಡುಗೆ ನೀಡುತ್ತಾ ಇದ್ದರೆ ನೀವು ನಿಮ್ಮ ಮೂಲ ವೇತನ ಮತ್ತು ಡಿಎ ಒಟ್ಟು ಮೊತ್ತದ ಶೇಕಡ 10 ರಷ್ಟನ್ನು ಸೆಕ್ಷನ್ 80 ಸಿಸಿಡಿ (2) ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಸರ್ಕಾರಿ ಉದ್ಯೋಗಿಗಳಿಗೆ ಈ ಮಿತಿ ಶೇಕಡ 14 ರಷ್ಟು. ನೀವೇ ಸ್ವತಃ ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಿದ್ದರೆ, ಸೆಕ್ಷನ್ 80 ಸಿಸಿಡಿ (1) ಅಡಿಯಲ್ಲಿ ಸೆಕ್ಷನ್ 80ಸಿಸಿಇ ಗೆ ಇರುವ ಮಿತಿಗೊಳಪಟ್ಟು ವಿನಾಯಿತಿ ಪಡೆದುಕೊಳ್ಳಬಹುದು. ಸೆಕ್ಷನ್ 80ಸಿ, 80 ಸಿಸಿಸಿ ಮತ್ತು 80 ಸಿಸಿಡಿ (1) ಅಡಿಗಳಲ್ಲಿಒಟ್ಟು ಒಂದೂವರೆ ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಲು ಸಾಧ್ಯವಿದೆ.
ಈಕ್ವಿಟಿ ಲಿಂಕ್ಡ್ ಸೇವಿಂಗಸ್ ಸ್ಕೀಂ (ಇಎಲ್ಎಸ್ಎಸ್) ಹೊರತುಪಡಿಸಿ, ಇತರೆ ಯಾವುದೇ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರು, ತೆರಿಗೆ ವಿನಾಯಿತಿ ಸಿಗುವುದಿಲ್ಲ. ಇಎಲ್ಎಸ್ಎಸ್ನಲ್ಲಿ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಇದೆ. ಈ ಸೆಕ್ಷನ್ 80 ಸಿ ಅಡಿ ಗರಿಷ್ಠ ವಿನಾಯಿತಿ ಮಿತಿ ಒಂದು ಲಕ್ಷದ 50 ಸಾವಿರ ರೂಪಾಯಿ ಮಾತ್ರ!
ಎನ್ ಪಿ ಎಸ್ ಅಡಿಯಲ್ಲಿ, ಮೆಚ್ಯುರಿಟಿ ಸಂದರ್ಭದಲ್ಲಿ ಒಟ್ಟು ಜಮೆಯಾಗಿರುವ ಮೊತ್ತದ ಶೇಕಡ 60 ರಷ್ಟನ್ನು ಹಿಂಪಡೆದರೆ ಅದರ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಉಳಿದ ಶೇಕಡ 40 ಕ್ಕೆ ಆನ್ಯುಟಿ ಪ್ಲಾನ್ ಖರೀದಿಸಬೇಕು. ಈ ಪ್ಲಾನ್ ರೆಗ್ಯುಲರ್ ಇನ್ಕಮ್ ಕೊಡತ್ತೆ. ಈ ಆನ್ಯುಟಿ ಪ್ಲಾನ್ ನಲ್ಲಿ ಹೂಡಿಕೆಗೆ ಯಾವುದೇ ತೆರಿಗೆ ಇರೋದಿಲ್ಲ. ಆದ್ರೆ ಆನ್ಯುಟಿ ಇನ್ಕಮ್ ಮೇಲೆ ನಿಮ್ಮ ಆದಾಯಕ್ಕೆ ಅನ್ವಯವಾಗೋ ತೆರಿಗೆ ಸ್ಲ್ಯಾಬ್ ನಂತೆ ತೆರಿಗೆ ವಿಧಿಸಲಾಗುತ್ತದೆ.
ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಿಂದ ಹಣ ಹಿಂಪಡೆದರೆ ಅಥವಾ ರಿಡೀಮ್ ಮಾಡಿಕೊಂಡರೆ ತೆರಿಗೆ ಅನ್ವಯವಾಗುತ್ತದೆ. ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಲ್ಲಿ 12 ತಿಂಗಳಿಗಿಂತ ಹೆಚ್ಚಿನ ಅವಧಿಯ ಹೂಡಿಕೆಯನ್ನು ದೀರ್ಘಾವಧಿ ಎಂದು ಪರಿಗಣಿಸಲಾಗುತ್ತದೆ. 12 ತಿಂಗಳ ಬಳಿಕ ಹೂಡಿಕೆ ಹಿಂಪಡೆದರೆ ದೀರ್ಘಾವಧಿ ಅಥವಾ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯವಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಒಂದು ಲಕ್ಷ ರೂಪಾಯಿವರೆಗಿನ ಕ್ಯಾಪಿಟಲ್ ಗೇನ್ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಇದನ್ನು ಮೀರಿದ ಮೊತ್ತ ಅಂದರೆ ಒಂದು ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತದ ಮೇಲೆ ಶೇಕಡ 10 ರಷ್ಟು ತೆರಿಗೆ ಅನ್ವಯವಾಗುತ್ತದೆ. ಒಂದು ವೇಳೆ ಹೂಡಿಕೆ ಮಾಡಿದ 12 ತಿಂಗಳೊಳಗೆ ಹಿಂಪಡೆದರೆ ಅಂದರೆ ಹೋಲ್ಡಿಂಗ್ ಪೀರಿಯಡ್ 12 ತಿಂಗಳಿಗಿಂತ ಕಡಿಮೆ ಇದ್ದರೆ, ಆಗ ಅಲ್ಪಾವಧಿ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಅಗುತ್ತದೆ. ಇದರ ಮೇಲೆ ಶೇಕಡ 15 ರಷ್ಟು ತೆರಿಗೆ ವಿಧಿಸಲ್ಪಡುತ್ತದೆ.
ಮೈ ವೆಲ್ತ್ ಗ್ರೋತ್ ಡಾಟ್ ಕಾಂ ನ ಸಹ ಸಂಸ್ಥಾಪಕರಾದ ಹರ್ಷದ್ ಚೇತನ್ ವಾಲಾ ಈ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ. ಅವರಿಂದ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ. ಈಕ್ವಿಟಿ ಮ್ಯೂಚುಯಲ್ ಫಂಡ್ ಗಳು ಮೂಲತಃ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಹೂಡಿಕೆ ಅವಧಿ ದೀರ್ಘಾವಧಿಯಾಗಿದ್ದರೆ ಈಕ್ವಿಟಿ ಫಂಡ್ ಗಳ ರಿಸ್ಕ್ ಕಡಿಮೆ ಇರುತ್ತದೆ. ದೀರ್ಘಾವಧಿಯಲ್ಲಿ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳ ಮೇಲೆ ಶೇಕಡ 12 ರಿಂದ 15 ರಷ್ಟು ರಿಟರ್ನ್ಸ್ ನಿರೀಕ್ಷಿಸಬಹುದು. ಎನ್ ಪಿ ಎಸ್ ಅನ್ನೋದು ಇನ್ನೂ ಡೈವರ್ಸಿಫೈಡ್. ಗರಿಷ್ಠ ಶೇಕಡ 75 ರಷ್ಟು ಈಕ್ವಿಟಿ ಅಲೊಕೇಷನ್ ಇದ್ದರೂ ಕೂಡ, ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಿಗೆ ಹೋಲಿಸಿದರೆ, ಎನ್ ಪಿ ಎಸ್ ಅಡಿಯಲ್ಲಿ ದೀರ್ಘಾವಧಿ ಹೂಡಿಕೆ ರಿಟರ್ನ್ಸ್ ಶೇಕಡ 2 ರಿಂದ 4 ರಷ್ಟು ಕಡಿಮೆ ಇರುತ್ತದೆ.
ಎನ್ ಪಿ ಎಸ್ ನಲ್ಲಾಗಲೀ ಅಥವಾ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಲ್ಲಾಗಲಿ ಹೂಡಿಕೆ ಮಾಡುವುದಕ್ಕೂ ಮೊದಲು, ಸ್ಕೀಂ ಸಂಬಂಧಿತ ದಾಖಲೆಗಳನ್ನು ಜಾಗರೂಕರಾಗಿ ಓದಿ. ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆ ಗುರಿಗಳನ್ನಾಧರಿಸಿ ಯಾವುದರಲ್ಲಿ ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಿ. ಫೈನ್ಯಾನ್ಷಿಯಲ್ ಪ್ಲಾನರ್ ಸಲಹೆ ಪಡೆದುಕೊಳ್ಳಿ. ನಿಮ್ಮ ಗುರಿಯು ಕಡಿಮೆ ರಿಸ್ಕಿ ಆಗಿದ್ದು, ಸಾಧಾರಣ ರಿಟರ್ನ್ಸ್ ಸಾಕಾಗುವುದಾದರೆ ನಿಮ್ಮ ರಿಟೈರ್ಮೆಂಟ್ ಪ್ಲಾನಿಂಗ್ ಗೆ ಎನ್ ಪಿ ಎಸ್ ಸೂಕ್ತ ಆಗತ್ತದೆ. ನಿವೃತ್ತ ಜೀವನ ಸೇರಿದಂತೆ ವಿವಿಧ ಹಣಕಾಸು ಗುರಿಗಳ ಈಡೇರಿಕೆಗಾಗಿ ಹೆಚ್ಚಿನ ರಿಸ್ಕ್ ತೊಗೋಳಕ್ಕೆ ಸಿದ್ಧರಿದ್ದರೆ ಅಂತಹವರು ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಯಾವುದನ್ನೇ ಆಯ್ಕೆ ಮಾಡಿಕೊಂಡರೂ ಎರಡು ಬಗೆಯ ಹೂಡಿಕೆಗಳಲ್ಲೂ ದೀರ್ಘಾವಧಿ ದೃಷ್ಟಿಕೋನ ಇಟ್ಟುಕೊಂಡಿರಬೇಕು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ