` decoded loan to value ratio and its impact on home loan | ನಿಮಗೆ ಎಷ್ಟು ಹೋಂ ಲೋನ್ ಸಿಗುತ್ತೆ? ಲೆಕ್ಕ ಹೀಗಿದೆ! | Money9 Kannada

ನಿಮಗೆ ಎಷ್ಟು ಹೋಂ ಲೋನ್ ಸಿಗುತ್ತೆ? ಲೆಕ್ಕ ಹೀಗಿದೆ!

ನೀವು ಸಾಲಕ್ಕೆ ಅರ್ಜಿ ಕೊಟ್ಟರೆ, ನಿಮಗೆ ಎಷ್ಟು ಹಣದ ಅಗತ್ಯ ಇದೆಯೋ ಅಷ್ಟೂ ಮೊತ್ತಕ್ಕೆ ಸಾಲ ಕೊಟ್ಟಿಯೇ ಕೊಡುತ್ತಾರೆ ಅಂದೇನೂ ಇಲ್ಲ. ಈ ಎಲ್ ಟಿ ವಿ ರೇಷ್ಯೋ ನಿರ್ಧರಿಸುವುದಕ್ಕೆ ಬ್ಯಾಂಕ್ ಗಳು ಅನೇಕ ಅಂಶಗಳನ್ನ ಪರಿಗಣಿಸುವುದಿದೆ.

ರಾಹುಲ್ ಅವರು ಮನೆ ಖರೀದಿಸೋ ಯೋಚನೆ ಮಾಡಿದ್ದಾರೆ. ಆದರೆ ಒಮ್ಮೆಲೆ ದೊಡ್ಡ ಮೊತ್ತ ಸೇರಿಸೋದು ಅವರಿಗೆ ಕಷ್ಟ.. ಹೀಗಾಗಿ ಅವರು ಗೃಹ ಸಾಲ ಪಡೆದು ತಮ್ಮ ಸ್ವಂತ ಸೂರು ಹೊಂದಬೇಕು ಅನ್ನೋ ಕನಸು ಈಡೇರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಅವರಿಗೆ ಬ್ಯಾಂಕ್ ನಿಂದ ಎಷ್ಟು ಮೊತ್ತದ ಸಾಲ ಸಿಗುತ್ತದೆ? ಉಳಿದ ಮೊತ್ತವನ್ನ ಅವರು ಹೇಗೆ ಹೊಂದಿಸಿಕೊಳ್ಳುತ್ತಾರೆ? ಡೌನ್ ಪೇಮೆಂಟ್ ಲೆಕ್ಕಾಚಾರ ಏನು? ಇದೆಲ್ಲವೂ ರಾಹುಲ್ ಗೆ ಒಗಟಾಗಿದೆ.. ಅವರ ಸಾಲದ ಎಲ್ ಟಿ ವಿ ರೇಷ್ಯೋ ಅಂದ್ರೆ ಲೋನ್ ಟು ವ್ಯಾಲ್ಯೂ ಅನುಪಾತ ಗೊತ್ತಾದರೆ ಎಲ್ಲಾ ಲೆಕ್ಕಾಚಾರಗಳು ಅವರಿಗೆ ಸುಲಭ ಆಗುತ್ತದೆ. ಹಾಗಾದ್ರೆ, ಈ ಎಲ್ ಟಿ ವಿ ರೇಷ್ಯೋ ಅಂದ್ರೇನು? ಅದನ್ನ ಹೇಗೆ ಕಂಡುಹಿಡಿಯೋದು? ಹೇಗೆ ಎಲ್ಲವನ್ನು ತಿಳಿದುಕೊಳ್ಳೋಣ.

ಆರ್ ಬಿ ಐನ ಮಾರ್ಗಸೂಚಿ ಪ್ರಕಾರ, ಬ್ಯಾಂಕ್ ಗಳು ಆಸ್ತಿ ಮೌಲ್ಯದ ಇಂತಿಷ್ಟು ಮಿತಿಯವರೆಗೆ ಮಾತ್ರ ಸಾಲ ನೀಡುವುದಕ್ಕೆ ಸಾಧ್ಯವಾಗುತ್ತದೆ. ಸಾಲವಾಗಿ ಸಿಗುವ ಮೊತ್ತ ಈ ಲೋನ್ ಟು ವ್ಯಾಲ್ಯೂ ರೇಷ್ಯೋ ಆಧರಿಸಿ ಇರುತ್ತದೆ. ಮನೆಯ ಮೌಲ್ಯ ಆಧರಿಸಿ ಎಷ್ಟು ಸಾಲ ಸಿಗತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ. ಆರ್ ಬಿ ಐ ನಿಯಮಗಳ ಪ್ರಕಾರ, ಮನೆಯ ಮೌಲ್ಯ 30 ಲಕ್ಷ ರೂಪಾಯಿವರೆಗೆ ಇದ್ದರೆ, ಆಗ ಬ್ಯಾಂಕ್ ಗಳು ಶೇಕಡ 90 ರಷ್ಟು ಸಾಲ ಕೊಡಬಹುದು. ಮನೆಯ ಮೌಲ್ಯ 30 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿಯಷ್ಟಿದ್ರೆ, ಆಗ ಈ ಲೋನ್ ಟು ವ್ಯಾಲ್ಯೂ ರೇಷ್ಯೋ ಶೇಕಡ 80 ರಷ್ಟರವರೆಗೆ ಇರಬಹುದು.. ಅದೇ ಆಸ್ತಿಯ ಮೌಲ್ಯ ಏನಾದ್ರೂ 75 ಲಕ್ಷ ರೂಪಾಯಿ ಮೇಲ್ಪಟ್ಟಿದ್ದರೆ, ಬ್ಯಾಂಕ್ ಗಳು ಮನೆಯ ಮೌಲ್ಯದ ಶೇಕಡ 75 ರಷ್ಟರವರೆಗೆ ಸಾಲ ಕೊಡಬಹುದು.

ನೀವು 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮಾಡುತ್ತೀರಾ ಎಂದು ಭಾವಿಸೋಣ. ಆರ್ ಬಿ ಐ ನಿಯಮಗಳ ಪ್ರಕಾರ, ಬ್ಯಾಂಕ್ ಗಳು ಶೇಕಡ 80 ರಷ್ಟರವರೆಗೆ ಲೋನ್ ಟು ವ್ಯಾಲ್ಯೂ ರೇಷ್ಯೋ ಕೊಡಬಹುದು. ಆದರೆ ಸಾಲದಾತರು ಶೇಕಡ 80 ರಷ್ಟು ಸಾಲ ಕೊಟ್ಟಿಯೇ ಕೊಡುತ್ತಾರೆ. ಒಂದು ವೇಳೆ ಬ್ಯಾಂಕ್ ನ ಎಲ್ ಟಿ ವಿ ಶೇಕಡ 70 ರಷ್ಟಿದ್ರೆ, ನಿಮಗೆ 42 ಲಕ್ಷ ರೂಪಾಯಿ ಮಾತ್ರ ಸಾಲ ಸಿಗುತ್ತದೆ. ಉಳಿದ 18 ಲಕ್ಷ ರೂಪಾಯಿಯನ್ನ ನೀವೇ ಭರಿಸಬೇಕಾಗತ್ತೆ. ಇದನ್ನೇ ಡೌನ್ ಪೇಮೆಂಟ್ ಎಂದು ಕರೆಯುತ್ತೇವೆ.

ನೀವು ಸಾಲಕ್ಕೆ ಅರ್ಜಿ ಕೊಟ್ಟರೆ, ನಿಮಗೆ ಎಷ್ಟು ಹಣದ ಅಗತ್ಯ ಇದೆಯೋ ಅಷ್ಟೂ ಮೊತ್ತಕ್ಕೆ ಸಾಲ ಕೊಟ್ಟಿಯೇ ಕೊಡುತ್ತಾರೆ ಅಂದೇನೂ ಇಲ್ಲ. ಈ ಎಲ್ ಟಿ ವಿ ರೇಷ್ಯೋ ನಿರ್ಧರಿಸುವುದಕ್ಕೆ ಬ್ಯಾಂಕ್ ಗಳು ಅನೇಕ ಅಂಶಗಳನ್ನ ಪರಿಗಣಿಸುವುದಿದೆ. ಅಂದರೆ ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯ , ಅವರ ಆದಾಯ, ಪ್ರಸ್ತುತ ಇರೋ ಸಾಲಗಳು, ವಯಸ್ಸು, ಹಾಗೇ ಖರೀದಿ ಮಾಡುತ್ತಿರುವ ಆಸ್ತಿಯ ಸ್ಥಿತಿಗತಿಯನ್ನ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈಗ ಎಲ್‌ ಟಿ ವಿ ರೇಷ್ಯೋ ಕಂಡು ಹಿಡಿಯುವ ಫಾರ್ಮುಲಾ ಏನು ನೋಡೋಣ. ಖರೀದಿ ಮಾಡುತ್ತಿರುವ ಆಸ್ತಿಯ ಮೌಲ್ಯಕ್ಕೆ ಎಷ್ಟು ಸಾಲ ಸಿಗುತ್ತದೆ ಎನ್ನುವುದರ ಮೇಲೆ ಅದನ್ನು ಲೆಕ್ಕ ಮಾಡಲಾಗುತ್ತದೆ. ಇದು ಎಷ್ಟು ಅಂತಾ ತಿಳಿದುಕೊಳ್ಳುವುದಕ್ಕೆ ಸಾಲದ ಮೊತ್ತವನ್ನು ಆಸ್ತಿಯ ಮೌಲ್ಯದಿಂದ ಭಾಗಿಸಿ 100 ರಿಂದ ಗುಣಿಸಬೇಕು.

ಉದಾಹರಣೆಗೆ, ರಾಹುಲ್‌ ಅವರು 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆರ್‌ ಬಿ ಐ ನಿಯಮಗಳ ಪ್ರಕಾರ, ಅವರಿಗೆ ಶೇಕಡ 80 ರಷ್ಟರವರೆಗೆ ಸಾಲ ಸಿಗುತ್ತದೆ, ಅಂದ್ರೆ 40 ಲಕ್ಷ ರೂಪಾಯಿ ಸಾಲ ಸಿಗುತ್ತದೆ. ಆದೆರೆ ರಾಹುಲ್‌ ಅವರ ಹಣಕಾಸು ಪರಿಸ್ಥಿತಿ ಪರಿಗಣಿಸಿ, ಬ್ಯಾಂಕ್‌ ಕೇವಲ 35 ಲಕ್ಷ ರೂಪಾಯಿ ಸಾಲ ಮಂಜೂರು ಮಾಡುತ್ತದೆ. ಈ ಸನ್ನಿವೇಶದಲ್ಲಿ, ರಾಹುಲ್‌ ಮನೆಯ ಎಲ್‌ ಟಿ ವಿ ರೇಷ್ಯೋ ಶೇಕಡ 70 ರಷ್ಟಾಗತ್ತದೆ. 35 ಲಕ್ಷ ರೂಪಾಯಿಯನ್ನ 50 ಲಕ್ಷ ರೂಪಾಯಿಯಿಂದ ಭಾಗಿಸಿ ಅದನ್ನ 100 ರಿಂದ ಗುಣಿಸಿದರೆ ಈ ಮೊತ್ತ ಸಿಗುತ್ತದೆ. ಇಲ್ಲಿ, ರಾಹುಲ್‌ ಅವರು 15 ಲಕ್ಷ ರೂಪಾಯಿ ಡೌನ್‌ ಪೇಮೆಂಟ್‌ ಮಾಡಬೇಕು. ಒಂದು ವೇಳೆ ರಾಹುಲ್‌ ಅವರು ತಮ್ಮ ಡೌನ್‌ ಪೇಮೆಂಟ್‌ ಮೊತ್ತವನ್ನ ಹೆಚ್ಚು ಮಾಡಿದರೆ ಆಗ ಎಲ್‌ ಟಿ ವಿ ರೇಷ್ಯೋ ಕಡಿಮೆ ಆಗುತ್ತದೆ. ಹೆಚ್ಚಿನ ಡೌನ್‌ ಪೇಮೆಂಟ್‌ ಪಾವತಿಸುವ ಗ್ರಾಹಕರಿಗೆ ಸಾಲದಾತರು ಆದ್ಯತೆ ಕೊಡುತ್ತಾರೆ. ಎಲ್‌ ಟಿ ವಿ ರೇಷ್ಯೋ, ಕಡಿಮೆ ಇದ್ದರೆ ಬ್ಯಾಂಕ್‌ ಗಳಿಗೆ ಸಾಲ ಕೊಡೋದು ಸುಲಭವಾಗುತ್ತದೆ.

ತೆರಿಗೆ ಮತ್ತು ಹೂಡಿಕೆ ತಜ್ಞರಾದ ಬಲವಂತ್‌ ಜೈನ್‌ ಈ ಬಗ್ಗೆ ಏನು ಹೇಳುತ್ತಾರೆ ಕೇಳೋಣ. ಗೃಹ ಸಾಲದ ಪ್ರಕರಣಗಳಲ್ಲಿ, ಆಸ್ತಿ ಮಾರಾಟಕ್ಕೆ ಮಾಡಿಕೊಂಡಿರೋ ಒಪ್ಪಂದದಲ್ಲಿರುವ ಮೌಲ್ಯ ಲೆಕ್ಕಕ್ಕೆ ಬರುವುದಿಲ್ಲ. ಬ್ಯಾಂಕ್‌ ಗಳು ತಮ್ಮದೇ ಲೆಕ್ಕಾಚಾರದ ಮೇಲೆ ಆಸ್ತಿ ಮೌಲ್ಯ ನಿರ್ಧರಿಸುತ್ತವೆ. ಒಪ್ಪಂದದ ಮೌಲ್ಯ ಹಾಗೂ ಬ್ಯಾಂಕ್‌ ಲೆಕ್ಕಾಚಾರ ಹಾಕುವ ಮೌಲ್ಯ, ಎರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅದನ್ನು ಬ್ಯಾಂಕ್‌ ಪರಿಗಣಿಸುತ್ತದೆ. ಖರೀದಿದಾರರ ವಾರ್ಷಿಕ ಆದಾಯ, ವಯಸ್ಸು, ಕ್ರೆಡಿಟ್‌ ಹಿಸ್ಟರಿ ಕೂಡ ಲೋನ್‌ ಅಪ್ರೂವಲ್‌ ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜೈನ್ ಹೇಳುತ್ತಾರೆ.

ಒಂದು ವೇಳೆ ನಿಮ್ಮ ಲೋನ್‌ ಟು ವ್ಯಾಲ್ಯೂ ರೇಷ್ಯೋ ಕಡಿಮೆ ಇದ್ದರೆ, ಆಗ ಬ್ಯಾಂಕ್‌ ಗಳ ರಿಸ್ಕ್‌ ಮಾರ್ಜಿನ್‌ ಕಡಿಮೆ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್‌ ಗಳು ನಿಮಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಆಫರ್‌ ಮಾಡುತ್ತವೆ. ಆದರೆ ಇದಕ್ಕೆ ನೀವು ಬ್ಯಾಂಕ್‌ ನವರೊಂದಿಗೆ ಮಾತನಾಡಬೇಕು. ನೆಗೋಷಿಯೇಷನ್‌ ಮಾಡಲಿಲ್ಲ ಎಂದರೆ ಬ್ಯಾಂಕ್‌ ಗಳು ಬಡ್ಡಿ ದರ ಕಡಿಮೆ ಮಾಡುವುದಿಲ್ಲ. ಇಂತಹ ಸನ್ನಿವೇಶದಲ್ಲಿ, ನೀವೂ ಕೂಡ ರಾಹುಲ್‌ ಅವರಂತೆ ಗೃಹ ಸಾಲ ಪಡೆದು ಮನೆ ಖರೀದಿ ಮಾಡಬೇಕು ಅಂತಾ ಯೋಚನೆ ಮಾಡಿದರೆ, ಡೌನ್‌ ಪೇಮೆಂಟ್‌ ಗೆ ಸಾಕಷ್ಟು ಹಣವನ್ನ ಹೇಗಾದರೂ ಹೊಂದಿಸಿಕೊಳ್ಳಬೇಕು. ಡೌನ್‌ ಪೇಮೆಂಟ್‌ ಆಗಿ ನೀವು ಹೆಚ್ಚಿನ ಹಣ ಕೊಟ್ಟಷ್ಟೂ, ನಿಮ್ಮ ಲೋನ್‌ ಟು ವ್ಯಾಲ್ಯೂ ರೇಷ್ಯೋ ಕಡಿಮೆ ಆಗತ್ತೆ! ಇದರಿಂದಾಗಿ ನಿಮಗೆ ಸುಲಭವಾಗಿ ಗೃಹ ಸಾಲ ಸಿಗುತ್ತದೆ. ಹಾಗೇ ನೀವು ಕಡಿಮೆ ಬಡ್ಡಿ ದರ ಪಾವತಿಸಲು ಸಾಧ್ಯವಾಗುತ್ತದೆ.

Published: April 19, 2024, 16:01 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ