` how to activate upi service for international travel | UPI ಇದ್ರೆ ಸಾಕು, ಬೇರೆ ಕರೆನ್ಸಿ ಯಾಕ್ ಬೇಕು? | Money9 Kannada

UPI ಇದ್ರೆ ಸಾಕು, ಬೇರೆ ಕರೆನ್ಸಿ ಯಾಕ್ ಬೇಕು?

ಭೀಮ್, ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ನಂತಹ ಯುಪಿಐ ಆಪ್‌ಗಳಲ್ಲಿ ಇಂಟರ್‌ನ್ಯಾಷನಲ್ ಟ್ರಾನ್ಸಾಕ್ಷನ್‌ ಆಯ್ಕೆ ಇದೆ. ಈ ಪೈಕಿ ಯಾವುದಾದರೂ ಆಪ್‌ಗೆ ಹೋಗಿ, ನಿಮ್ಮ ಪ್ರೊಫೈಲ್‌ ಮೇಲೆ ಕ್ಲಿಕ್ ಮಾಡಿ. ನಂತರ, ಪೇಮೆಂಟ್ ಸೆಟ್ಟಿಂಗ್ಸ್ ಸೆಕ್ಷನ್‌ಗೆ ಹೋಗಿ, ಯುಪಿಐ ಇಂಟರ್‌ನ್ಯಾಷನಲ್ ಆಯ್ಕೆ ಮಾಡಿ. ಆಮೇಲೆ, ನೀವು ಬಳಸಲು ಬಯಸಿದ ಬ್ಯಾಂಕ್ ಅಕೌಂಟ್‌ನಲ್ಲಿ ಆಕ್ಟಿವೇಟ್ ಮೇಲೆ ಟ್ಯಾಪ್ ಮಾಡಿ.

ಶೋಭಿತಾ ಮುಂದಿನ ತಿಂಗಳು ಮಾರಿಷಸ್‌ಗೆ ಟ್ರಿಪ್‌ ಹೋಗುವ ಪ್ಲಾನ್‌ ಮಾಡಿದ್ದಾರೆ. ಆಕೆ ಸುಮಾರು ಸಮಯದಿಂದಲೂ ಒಂದು ಟ್ರಿಪ್‌ಗೆ ಹೋಗಬೇಕು ಅಂತ ಅಂದುಕೊಂಡಿದ್ದಳು. ಹೀಗಾಗಿ, ಒಂದು ವಾರದ ಹಿಂದೆ ಇಂಟರ್‌ನ್ಯಾಷನಲ್ ಕ್ರೆಡಿಟ್ ಕಾರ್ಡ್ ಕೂಡಾ ಕೈಗೆ ಬಂದಿದೆ. ಒಂದು ಫಾರೆಕ್ಸ್ ಕಾರ್ಡ್‌ ಖರೀದಿ ಮಾಡಬೇಕು ಅಂತಲೂ ಅಂದುಕೊಂಡಿದ್ದಾಳೆ. ಹೆಚ್ಚು ಪೇಮೆಂಟ್ ಆಪ್ಷನ್ ಇದ್ದಷ್ಟೂ ಚೆನ್ನಾಗಿರುತ್ತದೆ ಅನ್ನೋದು ಅವಳ ಅಭಿಪ್ರಾಯ. ಆದರೆ, ಅವಳು ಮಾರಿಷಸ್‌ನಲ್ಲಿ ಯುಪಿಐ ಮೂಲಕವೂ ಪೇಮೆಂಟ್ ಮಾಡಬಹುದು ಎಂದು ಅವಳಿಗೆ ಗೊತ್ತಿಲ್ಲ. ಹೌದು… ಮಾರಿಷಸ್‌ನಂತಹ ಹಲವು ದೇಶಗಳಲ್ಲಿ ನೀವು ಯುಪಿಐ ಕ್ಯೂಆರ್‌ ಕೋಡ್ ಮೂಲಕ ಪೇಮೆಂಟ್ ಮಾಡಬಹುದು. UPI ಹಲವು ದೇಶಗಳಲ್ಲಿ ಇದೆ. ಇಂಟರ್‌ನ್ಯಾಷನಲ್ ಟ್ರಾವೆಲ್ ಮಾಡುವಾಗ ಇದನ್ನು ಹೇಗೆ ಬಳಸೋದು ಅಂತ ಬನ್ನಿ ತಿಳಿದುಕೊಳ್ಳೋಣ. ಸದ್ಯ, ಕ್ಯೂಆರ್‌ ಸ್ಕ್ಯಾನ್ ಮತ್ತು ಪೇಮೆಂಟ್ ಮಾಡುವ ಸೌಲಭ್ಯ ಹಲವು ದೇಶಗಳಲ್ಲಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಅಥವಾ NPCI ಈಗಾಗಲೇ ಸಿಂಗಾಪುರ, ಯುಎಇ, ಶ್ರೀಲಂಕಾ, ಮಾರಿಷಸ್‌ ಮತ್ತು ಭೂತಾನ್‌ನ ಲೋಕಲ್ ನೆಟ್‌ವರ್ಕ್‌ಗಳ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಜೊತೆಗೆ, ಫ್ರಾನ್ಸ್ ಮತ್ತು ಓಮನ್‌ ಸೇರಿದಂತೆ ಇತರ ದೇಶಗಳಲ್ಲಿ ಯುಪಿಐ ಮೂಲಕ ಆನ್‌ಲೈನ್‌ ಪೇಮೆಂಟ್ ಮಾಡಬಹುದು. ಆಗ್ನೇಯ ಏಷ್ಯಾದ ಕೆಲವು ದೇಶಗಳಲ್ಲೂ ಯುಪಿಐ ಬಳಸಬಹುದು. ಬ್ರಿಟನ್‌, ಅಮೆರಿಕ, ಆಸ್ಟ್ರೇಲಿಯಾ ಮತ್ತು ಇತರ ಯುರೋಪ್ ದೇಶಗಳಲ್ಲಿ ಯುಪಿಐ ಸೇವೆ ಆರಂಭಿಸುವ ಪ್ರಯತ್ನವೂ ಜಾರಿಯಲ್ಲಿದೆ.

ಎನ್‌ಪಿಸಿಐ ನ ಇಂಟರ್‌ನ್ಯಾಷನಲ್ ಯುನಿಟ್‌ ಎನ್‌ಪಿಸಿಐ ಇಂಟರ್‌ನ್ಯಾಷನಲ್ ಪೇಮೆಂಟ್ಸ್‌ ಲಿಮಿಟೆಡ್‌ ಅಥವಾ NPIL ಗ್ಲೋಬಲ್ ಪಾರ್ಟ್ನರ್‌ಗಳ ಎಲ್ಲ ರೀತಿಯ QR ಗಳನ್ನೂ ಮಾನ್ಯ ಮಾಡುತ್ತದೆ. ಗ್ರಾಹಕರಿಗೆ UPI ಆಯ್ಕೆ ನೀಡುವ ಆಯ್ಕೆ ಬ್ಯಾಂಕ್‌ಗಳ ಬಳಿ ಇದ್ದು, ಇದಕ್ಕೊಂದು ವ್ಯವಸ್ಥೆಯೂ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುಪಿಐ ವಹಿವಾಟು ಮಾಡಲು ತಮ್ಮ ಸಿಸ್ಟಮ್‌ಗಳಲ್ಲಿ ದೇಶಗಳು ಮತ್ತು ಅವುಗಳ ಕರೆನ್ಸಿಗಳನ್ನು ಸೇರಿಸುವ ಅವಕಾಶ ಬ್ಯಾಂಕ್‌ಗಳಿಗೆ ಇದೆ. ಹಾಗಾದರೆ, ಇದನ್ನು ನೀವು ವಿದೇಶದಲ್ಲಿ ಹೇಗೆ ಬಳಸುವುದು? ಮೊದಲು ನೀವು ನಿಮ್ಮ UPI ಆಪ್‌ನಲ್ಲಿ ಇಂಟರ್ನ್ಯಾಷನಲ್‌ ಪೇಮೆಂಟ್ ಸೌಲಭ್ಯ ಇದೆಯೇ ಅಥವಾ ಇಲ್ಲವೇ ಎಂದು ನೋಡಬೇಕು. ಇಂಟರ್‌ನ್ಯಾಷನಲ್ ಟ್ರಾನ್ಸಾಕ್ಷನ್‌ಗೆ ನೀವು ಈ ಆಪ್ಷನ್ ಅನ್ನು ಸಕ್ರಿಯಗೊಳಿಸಬೇಕು.

ಭೀಮ್, ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ನಂತಹ ಯುಪಿಐ ಆಪ್‌ಗಳಲ್ಲಿ ಇಂಟರ್‌ನ್ಯಾಷನಲ್ ಟ್ರಾನ್ಸಾಕ್ಷನ್‌ ಆಯ್ಕೆ ಇದೆ. ಈ ಪೈಕಿ ಯಾವುದಾದರೂ ಆಪ್‌ಗೆ ಹೋಗಿ, ನಿಮ್ಮ ಪ್ರೊಫೈಲ್‌ ಮೇಲೆ ಕ್ಲಿಕ್ ಮಾಡಿ. ನಂತರ, ಪೇಮೆಂಟ್ ಸೆಟ್ಟಿಂಗ್ಸ್ ಸೆಕ್ಷನ್‌ಗೆ ಹೋಗಿ, ಯುಪಿಐ ಇಂಟರ್‌ನ್ಯಾಷನಲ್ ಆಯ್ಕೆ ಮಾಡಿ. ಆಮೇಲೆ, ನೀವು ಬಳಸಲು ಬಯಸಿದ ಬ್ಯಾಂಕ್ ಅಕೌಂಟ್‌ನಲ್ಲಿ ಆಕ್ಟಿವೇಟ್ ಮೇಲೆ ಟ್ಯಾಪ್ ಮಾಡಿ. ಬೇರೆ ಬೇರೆ ಆಪ್‌ಗಳಲ್ಲಿ ಆಕ್ಟಿವೇಶನ್‌ ಅವಧಿಯನ್ನೂ ನೀವು ಸೆಟ್ ಮಾಡುವ ಅವಕಾಶ ಇದೆ. 1 ವಾರ, 2 ವಾರ, 1 ತಿಂಗಳು, 3 ತಿಂಗಳು…. ಅಥವಾ ನಿರ್ದಿಷ್ಟ ದಿನಾಂಕದವರೆಗೆ ಆಕ್ಟಿವೇಶನ್ ಮಾಡಬಹುದು. ನಂತರ, ಆಕ್ಟಿವೇಶನ್ ಕನ್ಫರ್ಮ್‌ ಮಾಡಲು UPI PIN ಎಂಟರ್ ಮಾಡಿದರೆ ಆಯಿತು. ಇನ್ನು ಯುಪಿಐ ಅನ್ನು ನೀವು ನಿಶ್ಚಿಂತೆಯಿಂದ ವಿದೇಶದಲ್ಲೂ ಬಳಸಬಹುದು.

ಭಾರತದಲ್ಲಿ ನಮಗೆ UPI ಪೂರ್ತಿ ಫ್ರೀ ಆಗಿದೆ. ಆದರೆ, ವಿದೇಶದಲ್ಲಿ ಇದನ್ನು ಬಳಸಬೇಕು ಎಂದರೆ ಫೀ ಕೊಡಬೇಕಾಗುತ್ತದೆ. ಎಕ್ಸ್‌ಚೇಂಜ್ ರೇಟ್ ಲೆಕ್ಕಾಚಾರ ಕೂಡಾ ಆಗುತ್ತದೆ. ಪಾರ್ಟ್ನರ್‌ ಬ್ಯಾಂಕ್‌ ಡಿಸ್‌ಪ್ಲೇ ಮಾಡಿದ ರೇಟ್ ಆಧರಿಸಿ ಎಕ್ಸ್‌ಚೇಂಜ್ ರೇಟ್ ಲೆಕ್ಕ ಮಾಡಲಾಗುತ್ತದೆ. ನೀವು ಪೇಮೆಂಟ್ ಮಾಡಿದಾಗ, ಎರಡೂ ಫಾರಿನ್ ಎಕ್ಸ್‌ಚೇಂಜ್ ರೇಟ್ ಮತ್ತು ಕರೆನ್ಸಿಯಲ್ಲಿ ಅದರ ವ್ಯಾಲ್ಯೂ ಕಾಣಿಸುತ್ತದೆ. ಆಗ ಗ್ರಾಹಕರಿಗೆ ಎಷ್ಟು ಹಣ ಡೆಬಿಟ್ ಆಗುತ್ತದೆ ಎಂದು ತಿಳಿಯುತ್ತದೆ… ಇದರಲ್ಲಿ ಫಾರಿನ್ ಎಕ್ಸ್‌ಚೇಂಜ್‌ ಕನ್ವರ್ಶನ್ ರೇಟ್ ಮತ್ತು ಬ್ಯಾಂಕ್ ವಿಧಿಸುವ ಫೀ ಅನ್ನೂ ತೋರಿಸಲಾಗುತ್ತದೆ… ಆದರೆ, ಯುಪಿಐ ಅಕ್ಸೆಪ್ಟ್ ಮಾಡುವ ಸ್ಥಳೀಯ ವ್ಯಾಪಾರಿಗಳು, ಅಂಗಡಿಗಳ ಸಂಖ್ಯೆ ಕಡಿಮೆ ಇರುತ್ತದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು…

ಹೀಗಾಗಿ, ವಿದೇಶಕ್ಕೆ ಹೋಗುವಾಗ UPI ಪೇಮೆಂಟ್ಸ್‌ ಅನ್ನು ಅಕ್ಸೆಪ್ಟ್ ಮಾಡುವ ಶಾಪ್‌ಗಳನ್ನು ನೀವು ಹುಡುಕಬೇಕು. ಸ್ಟೋರ್‌ಗಳ ಮೇಲೆ UPI/BHIM ಕಾಣಿಸುತ್ತದೆಯೇ ಎಂದು ನೋಡಿಕೊಂಡು ಮುಂದುವರಿಯುವುದು ಉತ್ತಮ. ನಿಮಗೆ ಇಂತಹ ಲೋಗೋ ಕಂಡರೆ, ಅಲ್ಲಿ UPI ಪೇಮೆಂಟ್ ಮಾಡಬಹುದು ಎಂದು ಅರ್ಥ.

Published: April 12, 2024, 12:42 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ