` how do i claim tax exemption on savings interest | ಉಳಿತಾಯ ಖಾತೆ, FD ಎಲ್ಲಿಂದ ಬಡ್ಡಿ ಬಂದರೂ ಟ್ಯಾಕ್ಸ್ ಕಟ್ಬೇಕಾ? | Money9 Kannada

ಉಳಿತಾಯ ಖಾತೆ, FD ಎಲ್ಲಿಂದ ಬಡ್ಡಿ ಬಂದರೂ ಟ್ಯಾಕ್ಸ್ ಕಟ್ಬೇಕಾ?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಟಿಟಿಎ ಅಡಿಯಲ್ಲಿ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಸಿಗುವ ಬಡ್ಡಿ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಒಂದು ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಸಿಗುವ ಹತ್ತು ಸಾವಿರ ರೂಪಾಯಿವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ.

ಬಡ್ಡಿ ರೂಪದಲ್ಲಿ ಆದಾಯ ಗಳಿಸಬಹುದಾದ ಅನೇಕ ಮಾರ್ಗಗಳಿವೆ. ಉಳಿತಾಯ ಖಾತೆ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಇತ್ಯಾದಿ. ನಿಮ್ಮ ವೇತನದ ಗಳಿಕೆ ಅಥವಾ ವೃತ್ತಿಯ ಗಳಿಕೆಯ ಮೇಲೆ ಅಥವಾ ಬ್ಯುಸಿನೆಸ್ ನಿಂದ ಸಿಗೋ ಆದಾಯದ ಮೇಲೆ ಹೇಗೆ ಆದಾಯ ತೆರಿಗೆ ವಿಧಿಸಲ್ಪಡುತ್ತದೆಯೋ ಹಾಗೇ ಬಡ್ಡಿಯಿಂದ ಸಿಗುವ ಆದಾಯದ ಮೇಲೆ ಕೂಡ ತೆರಿಗೆ ಅನ್ವಯವಾಗತ್ತದೆ. ಆದಾಗ್ಯೂ ನೀವು ಬಡ್ಡಿಯಿಂದ ಗಳಿಸುವ ಆದಾಯದ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚಿನ ಡಿಡಕ್ಷನ್ ಸಿಗುತ್ತದೆ. ಹಾಗಿದ್ದರೆ ನಿಮ್ಮ‌ ಹೂಡಿಕೆ ಗಳಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆಯೋ? ಇಲ್ಲವೋ? ಎನ್ನುವುದನ್ನು ತಿಳಿದುಕೊಳ್ಳೋಣ.

ಬಹುತೇಕ ಪ್ರತಿಯೊಬ್ಬರ ಬಳಿ ಕೂಡ ಉಳಿತಾಯ ಖಾತೆ ಇರುತ್ತದೆ. ಎಷ್ಟೋ ಜನರ ಬಳಿ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇರುತ್ತದೆ. ನಿಮ್ಮ ಬಳಿ ಹೆಚ್ಚು ಖಾತೆ ಇದ್ದರೆ ನಿಮಗೆ ಹೆಚ್ಚು ಬಡ್ಡಿ ಸಿಗುತ್ತದೆ. ಹೀಗಾಗಿ ತೆರಿಗೆಗೆ ಒಳಪಡುವ ಆದಾಯ ಸಹ ಹೆಚ್ಚಾಗುತ್ತದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಟಿಟಿಎ ಅಡಿಯಲ್ಲಿ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಸಿಗುವ ಬಡ್ಡಿ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಒಂದು ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಸಿಗುವ ಹತ್ತು ಸಾವಿರ ರೂಪಾಯಿವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ. ಈ ವಿನಾಯಿತಿ ಮಿತಿ ಪ್ರತ್ಯೇಕ ಖಾತೆಗಳಿಗೆ ಅನ್ವಯವಾಗಲ್ಲ.‌ ಎಲ್ಲಾ ಬ್ಯಾಂಕ್ ಗಳು ಮತ್ತು ಪೋಸ್ಟ್ ಆಫೀಸ್ ಖಾತೆ ಸೇರಿ ಎಲ್ಲಾ ಖಾತೆಗಳಿಗೆ ಜಮಾ ಆಗುವ ಒಟ್ಟು ಬಡ್ಡಿ ಮೊತ್ತದಲ್ಲಿ ಹತ್ತು ಸಾವಿರ ರೂಪಾಯಿಗೆ ಮಾತ್ರ ವಿನಾಯಿತಿ ಅನ್ವಯ ಆಗುತ್ತದೆ.

60 ವರ್ಷ ವಯಸ್ಸಿನೊಳಗಿರುವವರಿಗೆ ಮತ್ತು ಎಚ್ ಯು ಎಫ್ ಗಳಿಗೆ ಅಂದರೆ ಅವಿಭಕ್ತ ಹಿಂದು ಕುಟುಂಬಕ್ಕೆ ಈ ಡಿಡಕ್ಷನ್ ಸಿಗುತ್ತದೆ. ಎಫ್‌ಡಿ ಮತ್ತು ಆರ್ ಡಿ ಯಂತಹ ಠೇವಣಿಗಳು ಸೆಕ್ಷನ್ 80ಟಿಟಿಎ ವ್ಯಾಪ್ತಿಗೆ ಬರುವುದಿಲ್ಲ. ಉಳಿತಾಯ ಖಾತೆಗಳ ಒಟ್ಟು ಬಡ್ಡಿ ಮೊತ್ತ 10 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಹತ್ತು ಸಾವಿರ ಮೇಲ್ಪಟ್ಟ ಮೊತ್ತಕ್ಕೆ ತೆರಿಗೆ ಅನ್ವಯವಾಗುತ್ತದೆ. ಐಟಿಆರ್ ನಲ್ಲಿ ಇನ್ಕಮ್ ಫ್ರಂ ಅದರ್ ಸೋರ್ಸಸ್ ಅಡಿಯಲ್ಲಿ ಎಲ್ಲಾ ಉಳಿತಾಯ ಖಾತೆಗಳಿಂದ ಗಳಿಸಿರುವ ಒಟ್ಟು ಬಡ್ಡಿ ಮೊತ್ತ ಘೋಷಿಸಬೇಕು.‌ ಹತ್ತು ಸಾವಿರ ರೂಪಾಯಿಯಷ್ಟು ಡಿಡಕ್ಷನ್ ಆದ ಮೇಲೆ ಉಳಿಯುವ ಮೊತ್ತವನ್ನ ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ಈ ಒಟ್ಟು ಮೊತ್ತಕ್ಕೆ ನಿಮಗೆ ಅನ್ವಯವಾಗೋ ಟ್ಯಾಕ್ಸ್ ಸ್ಲಾಬ್ ನಂತೆ ತೆರಿಗೆ ವಿಧಿಸಲಾಗುತ್ತದೆ.

ಹಿರಿಯ ನಾಗರಿಕರಿಗೆ, ಆದಾಯ ತೆರಿಗೆ ಕಾಯ್ದೆಯಡಿ ವಿಶೇಷ ಸೆಕ್ಷನ್ 80 ಟಿಟಿಬಿ ಇದೆ.‌ ಇದರನ್ವಯ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮತ್ತು ರೆಕರಿಂಗ್ ಡೆಪಾಸಿಟ್ ಗಳಿಂದ ಸಿಗುವ ಬಡ್ಡಿಯ ಮೇಲೆ ವಾರ್ಷಿಕವಾಗಿ 50 ಸಾವಿರ ರೂಪಾಯಿಗೆ ಡಿಡಕ್ಷನ್ ಸಿಗುತ್ತದೆ. ಅಂದರೆ, ಹಿರಿಯ ನಾಗರಿಕರು ಬಡ್ಡಿ ರೂಪದಲ್ಲಿ ಗಳಿಸುವ 50 ಸಾವಿರ ರೂಪಾಯಿಗೆ ತೆರಿಗೆ ವಿನಾಯಿತಿ ಇದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ, ಎಚ್ ಯು ಎಫ್ ಗಳಿಗೆ ಮತ್ತು ಅನಿವಾಸಿ ಭಾರತೀಯರಿಗೆ ಸೆಕ್ಷನ್ 80ಟಿಟಿಬಿ ಅನ್ವಯವಾಗೋದಿಲ್ಲ. ಬಡ್ಡಿ ಆದಾಯದ ಮೇಲೆ ತೆರಿಗೆ ವಿನಾಯಿತಿಯ ಲಾಭ ಪಡೆಯುವುದಕ್ಕೆ ನೀವು ನಿಮ್ಮ ಐಟಿಆರ್ ಸಲ್ಲಿಸುವಾಗ ಪಡೆದಿರುವ ಬಡ್ಡಿಯ ಮಾಹಿತಿ ಒದಗಿಸಬೇಕು. ನಿಮಗೆ ಎಷ್ಟು ಬಡ್ಡಿ ಸಿಕ್ಕಿದೆ ಎನ್ನುವ ಬಗ್ಗೆ ಬ್ಯಾಂಕ್ ಸ್ಟೇಟ್ಮೆಂಟ್, ಇಂಟರೆಸ್ಟ್ ಸರ್ಟಿಫಿಕೇಟ್ ಮತ್ತು ಫಾರಂ 26 ಎಎಸ್ ಗಳಿಂದ ವಿವರಗಳನ್ನು ಕಲೆ ಹಾಕಬೇಕು. ಒಂದು ವೇಳೆ ಏನಾದರೂ ತಪ್ಪುಗಳಿದ್ದರೆ ತಕ್ಷಣ ಬ್ಯಾಂಕ್ ಗೆ ತಿಳಿಸಬೇಕು ಅಥವಾ ಆದಾಯ ತೆರಿಗೆ ಇಲಾಖೆಯ ಫೀಡ್ ಬ್ಯಾಕ್ ವ್ಯವಸ್ಥೆಯಲ್ಲಿ ಇದರ ಬಗ್ಗೆ ನಮೂದಿಸಿ ತಪ್ಪನ್ನು ಸರಿಪಡಿಸಿಕೊಳ್ಳಬೇಕು.

ನೀವು 60 ವರ್ಷ ವಯಸ್ಸಿನೊಳಗಿನವರಾಗಿದ್ದರೆ, ಎಫ್ ಡಿ ಗಳಿಗೆ ಸಿಗೋ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡತ್ತೆ. ಹಿರಿಯ ನಾಗರಿಕರಿಗೆ ಸೆಕ್ಷನ್ 80ಟಿಟಿಬಿ ಅಡಿ ಸಿಗೋ ಲಾಭ ನಿಮಗೆ ಸಿಗುವುದಿಲ್ಲ. ಐಟಿಆರ್ ನಲ್ಲಿ ಬಡ್ಡಿ ಆದಾಯ ನಮೂದಿಸಲು ಕೆಲವರು ಮರೆತುಹೋದರೆ, ಇನ್ನು ಕೆಲವರು ಉದ್ದೇಶಪೂರ್ವಕವಾಗಿ ಆ ವಿವರಗಳನ್ನು ಸಲ್ಲಿಸೋದಿಲ್ಲ. ಇದು ಸರಿಯಲ್ಲ. ನೀವು ವಿವರ ಕೊಡುತತ್ತಿರೋ ಇಲ್ವೋ, ಆದಾಯ ತೆರಿಗೆ ಇಲಾಖೆಗೆ ಇದರ ಬಗ್ಗೆ ಮಾಹಿತಿ ಇರುತ್ತದೆ. ಹೀಗಾಗಿ, ನೀವು ಉದ್ದೇಶಪೂರ್ವಕವಾಗಿ ಬಡ್ಡಿ ವಿವರ ನಮೂದಿಸದಿದ್ದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.

Published: April 19, 2024, 12:58 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ