ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ನಿವೃತ್ತರಾದ ಮಹೇಶ ನಿವೃತ್ತಿ ವೇಳೆ ಕಂಪನಿಯಿಂದ ದೊಡ್ಡ ಮೊತ್ತದ ಹಣ ಪಡೆದರು. ಈ ಹಣ ಹೂಡಿಕೆ ಮಾಡಲು ದಾರಿ ಹುಡುಕುತ್ತಾ ಮಹೇಶ್ ಬ್ಯಾಂಕ್ಗೆ ಹೋದರು. ಬ್ಯಾಂಕ್ ಮ್ಯಾನೇಜರ್ ಅವರಿಗೆ ವಿಮಾ ಉಳಿತಾಯ ಅಥವಾ ಇನ್ಶೂರೆನ್ಸ್ ಸೇವಿಂಗ್ಸ್ ಯೋಜನೆಯಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದರು. ಈ ಪಾಲಿಸಿಗೆ ಸಂಬಂಧಿಸಿದ ಅನೇಕ ಲಾಭಗಳನ್ನು ಬ್ಯಾಂಕ್ ಮ್ಯಾನೇಜರ್ ತಿಳಿಸಿದರು. ಅವರ ಸಲಹೆ ಆಧರಿಸಿಕೊಂಡೆ ಮಹೇಶ್ ಪಾಲಿಸಿ ಖರೀದಿ ಮಾಡಿದ್ರು. ಖರೀದಿ ನಂತರ ಈ ಪಾಲಿಸಿ ಪ್ರಯೋಜನಕಾರಿಯಲ್ಲ ಅನ್ನೋದು ಮಹೇಶ್ಗೆ ಮನದಟ್ಟಾಯಿತು. ಮಹೇಶ ಅವರಿಗೆ ಒಂದು ರೀತಿಯಲ್ಲಿ ವಂಚನೆಯಾಗಿತ್ತು. ತಪ್ಪು ಮಾಹಿತಿ ನೀಡಿ ಅವರಿಗೆ ಪಾಲಿಸಿ ಮಾರಲಾಗಿತ್ತು.
ವಿಮಾ ಏಜೆಂಟರು ತಪ್ಪು ಮಾಹಿತಿ ನೀಡಿ ಪಾಲಿಸಿ ಮಾರಾಟ ಮಾಡುವ ದೂರುಗಳು ಮೇಲಿಂದ ಮೇಲೆ ಬರುತ್ತಿವೆ. ಬ್ಯಾಂಕ್ ಗಳು ಇದನ್ನೇ ಮುಂದುವರಿಸುತ್ತಿವೆ. ಮಿಸ್ ಸೆಲ್ಲಿಂಗ್ ಅಥವಾ ವಿಮೆಯ ತಪ್ಪು ಮಾರಾಟವನ್ನು ತಡೆಯಲು, ವಿಮಾ ನಿಯಂತ್ರಕ ಸಂಸ್ಥೆ IRDA ಈಗ 55 ವರ್ಷಕ್ಕಿಂತ ಮೇಲ್ಪಟ್ಟ ಜನರಿಗಾಗಿ ವಿನ್ಯಾಸಗೊಳಿಸಲಾದ ವಿಮಾ ಪಾಲಿಸಿಗಳ ಪರಿಶೀಲನೆ ಹೆಚ್ಚಿಸಲು ಮುಂದಾಗಿದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳೆರಡನ್ನೂ ಸೇರಿಸಲಾಗಿದ್ದು ಒಂದು ಸುತ್ತಿನ ಪರಿಶೀಲನೆ ನಡೆಸಲಾಗುತ್ತದೆ.
ಇನ್ಶೂರೆನ್ಸ್ ಗಳ ಮಿಸ್ ಸೆಲ್ಲಿಂಗ್ ಅನ್ನು ಸರ್ಕಾರ ಸಹ ಗಂಭೀರವಾಗಿ ತೆಗೆದುಕೊಂಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಫೈನಾಶಿಯಲ್ ಸರ್ವೀಸ್ ಸೆಕ್ರೆಟರಿ ಸಾರ್ವಜನಿಕ ವಲಯದ ವಿವಿಧ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ವಿಮಾ ಮಾರಾಟದ ಸಮಯದಲ್ಲಿ ನಡೆಯುವ ಮಾತುಕತೆಗಳ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಬಹುದಾ ಅನ್ನೋದು ಈ ಸಭೆಯಲ್ಲಿ ಚರ್ಚೆಯಾಗಿದೆ. ಗ್ರಾಹಕರಿಗೆ ವಿಮಾ ಪಾಲಿಸಿಯನ್ನು ಮಾರಾಟ ಮಾಡುವಾಗ ಅವರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಅಧಿಕೃತವಾಗಿ ದಾಖಲು ಮಾಡುವ ಉದ್ದೇಶ ಇದರ ಹಿಂದೆ ಇದೆ.
ಸದ್ಯ ದೇಶದಲ್ಲಿ ಒಂಭತ್ತು ಬ್ಯಾಂಕ್ಗಳು ಕಾರ್ಪೊರೇಟ್ ಏಜೆಂಟ್ಗಳ ರೀತಿ ತೊಡಗಿಸಿಕೊಂಡಿದ್ದು ವಿಮೆ ಮಾರಾಟ ಮಾಡಬಹುದು. 2022-23 ರ ಆರ್ಥಿಕ ವರ್ಷದಲ್ಲಿ ಈ ರೀತಿ ಬ್ಯಾಂಕ್ಗಳು ಜೀವ ವಿಮಾ ಕಂಪನಿಗಳ ಹೊಸ ವ್ಯವಹಾರ ಪ್ರೀಮಿಯಂಗಳಿಗೆ ಶೇ. 17.44 ಮತ್ತು ಜೀವೇತರ ವಿಮೆಗೆ ಶೇ. 5.93 ಕೊಡುಗೆ ನೀಡಿವೆ. ವಿಮೆಯನ್ನು ಮಾರಾಟ ಮಾಡುವ ಬ್ಯಾಂಕ್ಗಳಲ್ಲಿನ ವಿಭಾಗವನ್ನು ಬ್ಯಾಂಕ್ ಶ್ಯೂರೆನ್ಸ್ ಎಂದು ಕರೆಯಲಾಗುತ್ತದೆ. ಈ ಡಿಪಾರ್ಟ್ ಮೆಂಟ್ ಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಸೇಲ್ಸ್ ಟಾರ್ಗೆಟ್ ನೀಡಲಾಗಿರುತ್ತದೆ. ಹಾಗಾಗಿ ಈ ಟಾರ್ಗೆಟ್ ರೀಚ್ ಮಾಡಲು ಉದ್ಯೋಗಿಗಳು ಕೆಲವೊಂದು ಸಲ ಬೇರೆಯ ಮಾರ್ಗ ಹಿಡಿಯುತ್ತಾರೆ.
ಯಾವ ಗ್ರಾಹಕರು ತಮ್ಮ ಖಾತೆಗಳಲ್ಲಿ ಹೆಚ್ಚಿಮ ಮೊತ್ತ ಹೊಂದಿದ್ದಾರೆ ಅನ್ನೋದು ಬ್ಯಾಂಕ್ ಉದ್ಯೋಗಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಥವರನ್ನೇ ಟಾರ್ಗೆಟ್ ಮಾಡಿ ಅವರಿಗೆ ತಪ್ಪು ಮಾಹಿತಿ ನೀಡಿ ವಿಮೆ ಮಿಸ್ ಸೆಲ್ಲಿಂಗ್ ಮಾಡುತ್ತಾರೆ. ಈ ರೀತಿ ಮಿಸ್ ಸೆಲ್ಲಿಂಗ್ ಮಾಡಿದ್ದರೂ ಸಹ ಬ್ಯಾಂಕ್ ಉದ್ಯೋಗಿಗಳು ಇನ್ಸೆಂಟೀವ್ ಪಡೆಯುತ್ತಾರೆ. ಇದೇ ಕಾರಣಕ್ಕೆ ಇನ್ಶೂರೆನ್ಸ್ ಮಿಸ್ ಸೆಲ್ಲಿಂಗ್ ಪ್ರಕರಣಗಳು ಹೆಚ್ಚುತ್ತಿವೆ.
ಈ ರೀತಿ ವಿಮೆಯನ್ನು ಮಿಸ್ ಸೆಲ್ಲಿಂಗ್ ಮಾಡುವುದನ್ನು ತಡೆಯುವುದು ಹೇಗೆ ಎನ್ನುವ ಪ್ರಶ್ನೆ ಸಹ ಉದ್ಭವವಾಗುತ್ತದೆ. ಜೀವವಿಮೆಯು ನಿಮ್ಮ ಆರ್ಥಿಕ ಭದ್ರತೆಗಾಗಿ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ವಿಮೆಯನ್ನು ಎಂದಿಗೂ ಹೂಡಿಕೆಯ ಮ ಮಾರ್ಗ ಎಂದು ನೋಡಬಾರದು.
ಲೈಫ್ ಇನ್ಶೂರೆನ್ಸ್ ಎಂಡೋವ್ ಮೆಂಟ್ ಯೋಜನೆಗಳಲ್ಲಿ ಹೂಡಿಕೆಯ ಮೇಲೆ ಸರಾಸರಿ ವಾರ್ಷಿಕ ಶೇ. 5-6 ರಷ್ಟು ರಿಟರ್ನ್ಸ್ ಸಹ ಪಡೆಯಬಹುದಾಗಿದೆ. ಹಣದುಬ್ಬರದ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಈ ರಿಟರ್ನ್ಸ್ ಪ್ರಮಾಣ ಕಡಿಮೆಯೇ ಆಗುತ್ತದೆ. ಬ್ಯಾಂಕ್ ಉದ್ಯೋಗಿ ಅಥವಾ ಏಜೆಂಟ್ ಹೂಡಿಕೆ ಲಾಭದ ಹೆಸರಿನಲ್ಲಿ ವಿಮೆ ಖರೀದಿಸಲು ಕೇಳಿದಾಗಲೆಲ್ಲಾ ಅವರನ್ನು ಸಂಪೂರ್ಣವಾಗಿ ನಂಬಲು ಹೋಗಬೇಡಿ. ಇತರ ತಜ್ಞರಿಂದ ಎರಡನೇ ಅಭಿಪ್ರಾಯವನ್ನು ಪಡೆದು ಮುಂದೆ ಹೆಜ್ಜೆ ಇಡಿ. ನೀವು ಖರೀದಿಸುತ್ತಿರುವ ಯಾವುದೇ ಪಾಲಿಸಿಯ ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಪಾಲಿಸಿಯ ಕಂಡಿಶನ್ ಗಳನ್ನೆಲ್ಲ ಸರಿಯಾಗಿ ಓದಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ.
ನೀವು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ವಿಮಾ ಪಾಲಿಸಿ ಖರೀದಿ ಮಾಡುವುದು ಬುದ್ಧಿವಂತಿಕೆ ಅಲ್ಲ. ವಯಸ್ಸು ಹೆಚ್ಚಾದಂತೆ ವಿಮೆ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತ ಹೋಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ಅಲ್ಲದೇ ಅಂತಿಮವಾಗಿ ಸಿಗುವ ರಿಟರ್ನ್ಸ್ ಮೊತ್ತ ಸಹ ಕಡಿಮೆಯಾಗುತ್ತದೆ.
SEBI ನೋಂದಾಯಿತ ಹೂಡಿಕೆ ಸಲಹೆಗಾರ ಜಿತೇಂದ್ರ ಸೋಲಂಕಿ ಈಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಿಮೆ ಮಿಸ್ ಸೆಲ್ಲಿಂಗ್ ಮಾಡುವುದನ್ನು ತಡೆಯಲು IRDA ಉತ್ತಮ ಹೆಜ್ಜೆಯನ್ನು ತೆಗೆದುಕೊಂಡಿದೆ ಅಂತಾ ಅವರಿ ಹೇಳುತ್ತಾರೆ. ಸಾಮಾನ್ಯವಾಗಿ, 55 ವರ್ಷಕ್ಕಿಂತ ಮೇಲ್ಪಟ್ಟ ಜನರು ಬ್ಯಾಂಕ್ ಖಾತೆಗಳಲ್ಲಿ ಹೆಚ್ಚು ಹಣವನ್ನು ಹೊಂದಿರುತ್ತಾರೆ. ಇದೇ ಕಾರಣಕ್ಕೆ ಅವರು ವಿಮೆ ತಪ್ಪು-ಮಾರಾಟಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು. SEBI ಮತ್ತು ಫೈನಾನ್ಸ್ ಮಿನಿಸ್ಟ್ರಿ ಇದನ್ನು ತಡೆಯಲು ಹೆಜ್ಜೆ ಇಟ್ಟಿವೆ. ವಿಮಾ ಏಜೆಂಟ್ ಗಳು ಮತ್ತು ಬ್ಯಾಂಕ್ಗಳ ಹೊಣೆಗಾರಿಕೆ ಸಹ ಹೆಚ್ಚಾಗಬೇಕಿದೆ. ಜನರಿಗೆ ವಿಮೆ ಮಿಸ್ ಸೆಲ್ಲಿಂಗ್ ಮಾಡುವ ಬದಲು ನೂರು ಬಾರಿ ಯೋಚನೆ ಮಾಡಬೇಕಾಗುತ್ತದೆ. ಕಠಿಣ ನಿಬಂಧನೆಗಳು ಇನ್ಶೂರೆನ್ಸ್ ನ ಸಮಗ್ರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮಾಡುತ್ತದೆ.
ಯಾವುದೇ ಕಾರಣಕ್ಕೂ ಹೂಡಿಕೆ ಉದ್ದೇಶ ಇಟ್ಟುಕೊಂಡು ವಿಮೆಯಲ್ಲಿ ಹಣ ತೊಡಗಿಸುವುದು ಸರಿಯಲ್ಲ. ಮ್ಯೂಚುವಲ್ ಫಂಡ್ಗಳು, ಸಣ್ಣ ಉಳಿತಾಯ ಯೋಜನೆಗಳು ಮತ್ತು ಎಫ್ಡಿಗಳು ಉತ್ತಮ ಹೂಡಿಕೆ ಮಾರ್ಗಗಳನ್ನು ನಿಮ್ಮ ಮುಂದೆ ಇಟ್ಟಿವೆ. ಇಲ್ಲಿ ಉತ್ತಮ ರಿಟರ್ನ್ಸ್ ಪಡೆದುಕೊಳ್ಳಲು ಸಾಧ್ಯವಿದೆ. ಇದಲ್ಲದೆ ನಿಮ್ಮ ಹಣ ಲಿಕ್ವಿಡ್ ಅಥವಾ ನಗದು ರೂಪದಲ್ಲಿ ಪಡೆದುಕೊಳ್ಳಲು ಸಾಧ್ಯವಿರುತ್ತದೆ. ನಿಮ್ಮ ಹಣ ನೀವೆ ಹಿಂಪಡೆಯಲು ವಿಮಾ ಪಾಲಿಸಿ ಮೆಚ್ಯೂರ್ ಆಗುವವರೆಗೆ ಕಾಯಬೇಕಾದ ಸ್ಥಿತಿ ಇರುವುದಿಲ್ಲ. ನೀವು ಎಚ್ಚರಿಂದ ಇದ್ದಷ್ಟು ಸುರಕ್ಷಿತವಾಗಿ ಇರುತ್ತೀರಿ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ