ನಿಕಿತಾ ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಇದಕ್ಕೂ ಮೊದಲು ಅವರು ತಮ್ಮ ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಕುಟುಂಬ ದೊಡ್ಡದಾಗುತ್ತಾ ಹೋದಂತೆ ಮನೆ ಚಿಕ್ಕದಾಯಿತು ಎನ್ನುವ ಆಲೋಚನೆ ಶುರುವಾಯಿತು. ಹೊಸ ಮನೆಗೆ ಶಿಫ್ಟ್ ಆದ ಮೇಲೆ ಆ ತಮ್ಮ ಹೊಸ ಮನೆಯ ವಸ್ತುಗಳಿಗೆ ವಿಮೆ ಮಾಡಿಸುವುದು ಹೇಗೆ ಎನ್ನುವದು ತಕ್ಷಣಕ್ಕೆ ಅವರಿಗೆ ಗೊತ್ತಾಗಲಿಲ್ಲ. ನಿಮ್ಮ ಮನೆ ಹಾಗೂ ನಿಮ್ಮ ಮನೆಯಲ್ಲಿರುವ ವಸ್ತುಗಳ ಮೇಲೆ ವಿಮೆ ಪಡೆದುಕೊಳ್ಳುವುದು ಬಹಳ ಸುಲಭ. ಇದಕ್ಕಾಗಿ ನೀವು ಸಮಗ್ರ ಮನೆ ವಿಮಾ ಪಾಲಿಸಿ ತೆಗೆದುಕೊಳ್ಳಬಹುದು. ಇದರಲ್ಲಿ ಮನೆಯ ಕಟ್ಟಡದ ಜೊತೆಗೆ ಮನೆಯಲ್ಲಿಟ್ಟಿರುವ ವಸ್ತುಗಳಿಗೂ ವಿಮೆ ಸಿಗುತ್ತದೆ. ಪ್ರಸ್ತುತ, ಮನೆಯು ನಿಕಿತಾ ಅವರ ಒಡೆತನದಲ್ಲಿಲ್ಲ. ಅಂದರೆ ಅವರು ಮನೆ ಮಾಲೀಕರಲ್ಲ.. ಹೀಗಾಗಿ ಅವರು ಅದಕ್ಕಾಗಿ ಗೃಹ ವಿಮೆ ಪಡೆಯಲು ಸಾಧ್ಯವಿಲ್ಲ. ಹಾಗಿದ್ದರೆ ಇದಕ್ಕೆ ಪರಿಹಾರ ಏನು?
ನೀವೂ ಕೂಡ ನಿಕಿತಾ ಅವರ ಸಮಸ್ಯೆಯನ್ನೇ ಎದುರಿಸುತ್ತಿದ್ದರೆ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿರುವ ವಸ್ತುಗಳಿಗೆ ಮಾತ್ರ ವಿಮೆ ಮಾಡಿಸಬೇಕಾದರೆ ನೀವು ಈ ವಿಶೇಷ ವಿಮೆ ಖರೀದಿಸಬಹುದು. ಇದುವೇ ಕಂಟೆಂಟ್ ಒನ್ಲಿ ಕವರ್ ಪ್ಲಾನ್. ವಿವಿಧ ವಿಮಾ ಕಂಪೆನಿಗಳ ಹೋಂ ಇನ್ಷುರೆನ್ಸ್ ಪ್ಲಾನ್ ಗಳಲ್ಲಿ, ಕಂಟೆಂಟ್ ಒನ್ಲಿ ಕವರ್ ಪ್ಲಾನ್ ಇರುತ್ತದೆ. ಇದರಡಿ ಮನೆಯಲ್ಲಿರುವ ವಸ್ತುಗಳಿಗೆ ವಿಮೆ ಕವರೇಜ್ ಸಿಗುತ್ತದೆ. ಅಂದರೆ ಟಿವಿ, ಫ್ರಿಡ್ಜ್, ಎಸಿ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ವಿಮೆ ಮಾಡಿಸಬಹುದು. ಜೊತೆಗೆ ಮನೆಯಲ್ಲಿರೋ ಪೀಠೋಪಕರಣ, ಮನೆಯಲ್ಲಿ ಅಳವಡಿಸಿರುವ ವಿದ್ಯುತ್ ಚಿಮಣಿ, ದುಬಾರಿ ಲೈಟಿಂಗ್ ಇತ್ಯಾದಿಗಳಿಗೂ ವಿಮೆ ಸಿಗುತ್ತದೆ. ನಿಮ್ಮ ಮೌಲ್ಯಯುತ ವಸ್ತುಗಳಾದ ಆಭರಣ, ದುಬಾರಿ ಪೇಂಟಿಂಗ್ ಅಥವಾ ಚಿತ್ರಕಲೆ ಅಥವಾ ಯಾವುದೇ ಕಲಾಕೃತಿಗೂ ವಿಮೆ ಮಾಡಿಸಬಹುದು. ಆದರೆ, ಇದಕ್ಕಾಗಿ ನೀವು ಆ್ಯಡ್ ಆನ್ ಕವರ್ ತೆಗೆದುಕೊಳ್ಳಬೇಕು. ಇವುಗಳಿಗೆ ಹಾನಿಯಾದರೆ ಆಗ ನಿಮಗೆ ರೀ ಎಂಬರ್ಸ್ಮೆಂಟ್ ಸಿಗುತ್ತದೆ.
ಹಾಗಿದ್ದರೆ ಈ ವಿಮೆ ಪಡೆದುಕೊಳ್ಳುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳಬೇಕು ಅಲ್ಲವೆ? ಬಹುತೇಕ ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳು ಅಂದರೆ ಜನರಲ್ ಇನ್ಷುರೆನ್ಸ್ ಕಂಪೆನಿಗಳು ಈ ಬಗೆಯ ವಿಮೆ ಕೊಡುತ್ತಿವೆ. ನೀವು ಯಾವ ಕಂಪೆನಿಯಿಂದ ಇನ್ಷುರೆನ್ಸ್ ತೆಗೆದುಕೊಳ್ಳತ್ತಿರೋ ಆ ಕಂಪನಿಗೆ ನಿಮ್ಮ ಮನೆಯಲ್ಲಿರೋ ಮೌಲ್ಯಯುತ ವಸ್ತುಗಳ ಪಟ್ಟಿ ಕೊಡಬೇಕಾಗುತ್ತದೆ. ಇದರ ಜೊತೆಗೆ, ಇವುಗಳ ಅಂದಾಜು ಬೆಲೆಯನ್ನ ಕೂಡ ತಿಳಿಸಬೇಕಾಗುತ್ತದೆ. ಯಾವುದೇ ನಷ್ಟ ಸಂಭವಿಸಿದರೆ ವಿಮಾ ಕಂಪೆನಿಗೆ ಕ್ಲೇಮ್ ಸಲ್ಲಿಸಬೇಕಾಗುತ್ತದೆ. ಕಂಪೆನಿಯು ಈ ಕ್ಲೇಮುಗಳ ರೀಪ್ಲೇಸ್ಮೆಂಟ್ ವ್ಯಾಲ್ಯೂ ನಿರ್ಧರಿಸುತ್ತದೆ. ಈ ಮೌಲ್ಯವನ್ನ ನಿರ್ಧರಿಸುವಾಗ ಕಂಪೆನಿಯು ಕೆಲವು ಅಂಶಗಳನ್ನ ಪರಿಗಣಿಸುತ್ತದೆ. ಉದಾಹರಣೆಗೆ ಸವಕಳಿ ಅಥವಾ ಡಿಪ್ರಿಸಿಯೇಷನ್. ವಿಮಾ ಪಾಲಿಸಿ ಖರೀದಿಗೂ ಮೊದಲು ನೀವು ಆ ಪಾಲಿಸಿಗೆ ಸಂಬಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಓದಿ ತಿಳಿದುಕೊಳ್ಳಬೇಕು. ಆಗ ನಿಮಗೆ ಆ ಪಾಲಿಸಿಯಲ್ಲಿ ಏನೇನು ಕವರ್ ಆಗುತ್ತಿದೆ? ಯಾವುದು ಇಲ್ಲ ಎನ್ನುವುದು ಗೊತ್ತಾಗುತ್ತದೆ.
ಹೋಂ ಕಂಟೆಂಟ್ ಕವರೇಜ್ ಅಡಿ ಟೆನ್ಯುರ್ ಅಂದರೆ ನಿಮಗೆ ಎಷ್ಟು ಅವಧಿಗೆ ವಿಮೆ ಬೇಕು ಅನ್ನೋದು ಫ್ಲೆಕ್ಸಿಬಲ್ ಆಗಿರತ್ತೆ. ನೀವು ಒಂದರಿಂದ ಐದು ವರ್ಷಗಳ ಅವಧಿಗೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ಲಾನ್ ಖರೀದಿಸಬಹುದು. ಇದು ಸಮಗ್ರ ಕವರೇಜ್ ಒದಗಿಸತ್ತೆ. ಜೊತೆಗೆ ಅಗ್ನಿ ಅವಘಡ, ಪ್ರಾಕೃತಿಕ ವಿಕೋಪದಿಂದ ಹಾನಿ, ಕಳ್ಳತನ, ಆಕಸ್ಮಿಕ ಅಪಘಾತದಿಂದ ಹಾನಿ ಮೊದಲಾದವುಗಳ ನಷ್ಟವನ್ನ ಈ ವಿಮೆ ಭರಿಸತ್ತೆ.
ಹಾಗಾದ್ರೆ, ಈ ವಿಮೆ ಕ್ಲೇಮ್ ಮಾಡೋದು ಹೇಗೆ ತಿಳ್ಕೊಳೋಣ ಬನ್ನಿ… ಹಾನಿ ಅಥವಾ ನಷ್ಟ ಸಂಭವಿಸಿದ್ರೆ, ತಕ್ಷಣ ವಿಮಾ ಕಂಪೆನಿಗೆ ವಿಷಯ ತಿಳಿಸಿ. ಅದರ ತುರ್ತು ಸಹಾಯವಾಣಿ ಸಂಖ್ಯೆ ಅಥವಾ ನೋಂದಾಯಿತ ಇ-ಮೇಲ್ ಐಡಿಗೆ ವಿಷಯ ತಲುಪಿಸಿ. ಎಲ್ಲಾ ಅಗತ್ಯ ದಾಖಲೆಗಳನ್ನ ಸಿದ್ಧವಾಗಿಟ್ಟುಕೊಳ್ಳಿ. ಆಗ ಕ್ಲೇಮ್ ಸಲ್ಲಿಸೋದು ಸುಲಭ ಆಗತ್ತೆ. ಕಂಪೆನಿಯು ಕ್ಲೇಮಿನ ಕನ್ಫರ್ಮೇಷನ್ ಗೆ ನಿಮ್ಮಿಂದ ಸಾಕ್ಷ್ಯಾಧಾರ ಅಥವಾ ವಿವರಣೆ ಕೇಳಬಹುದು. ಅಂದ್ರೆ ನಿಮ್ಮ ಬಳಿ ವೋಚರ್ ಗಳು, ಬಿಲ್ ಗಳನ್ನ ಇಟ್ಕೊಂಡಿರಬೇಕು. ಕಂಪೆನಿಯು ಒಬ್ಬ ತನಿಖಾಧಿಕಾರಿಯನ್ನ ನೇಮಕ ಮಾಡುತ್ತದೆ. ಅವರು ನೀವು ಕೊಡೋ ಎವಿಡೆನ್ಸ್ ಮತ್ತು ಕ್ಲೇಮ್ ಬಗ್ಗೆ ಗಮನಹರಿಸುತ್ತಾರೆ. ನೀವು ಅವರೊಂದಿಗೆ ಸಹಕರಿಸಬೇಕಾಗುತ್ತದೆ.
ಈ ಬಗೆಯ ವಿಮೆಗಾಗಿ ಎಷ್ಟು ಮೊತ್ತದ ಪ್ರೀಮಿಯಂ ಖರೀದಿಸಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಸಹ ತುಂಬಾನೇ ಮುಖ್ಯವಾಗುತ್ತದೆ. ಈಗ ಇದನ್ನು ಎರಡು ಬೇರೆ ಬೇರೆ ಉದಾಹರಣೆಗಳಿಂದ ಅರ್ಥ ಮಾಡ್ಕೋಳೋಣ ಬನ್ನಿ.
ಎಚ್ ಡಿ ಎಫ್ ಸಿ ಎರ್ಗೋ ಹೋಂ ಕಂಟೆಂಟ್ ಪಾಲಿಸಿ ಇದೆ. ಇದರಡಿ, ಮೂವತ್ತು ಸಾವಿರ ರೂಪಾಯಿಗಳಿಂದ ಐವತ್ತು ಲಕ್ಷ ರೂಪಾಯಿವರೆಗಿನ ಮೌಲ್ಯದ ಆಸ್ತಿಗಳಿಗೆ ವಿಮೆ ಮಾಡಿಸಬಹುದು. ಪಾಲಿಸಿ ಪ್ರೀಮಿಯಂ ಮೊತ್ತ, ಸಮ್ ಇನ್ಷೂರ್ಡ್ ಮೊತ್ತ ಆಧರಿಸಿರುತ್ತದೆ. ಒಂದು ವೇಳೆ ಸಮ್ ಇನ್ಷೂರ್ಡ್ 10 ಲಕ್ಷ ರೂಪಾಯಿ ಇರಬೇಕು ಅಂತಾ ನೀವು ಬಯಸಿದರೆ ನೀವು ವಾರ್ಷಿಕವಾಗಿ 6 ಸಾವಿರದ 300 ರೂಪಾಯಿ ಮತ್ತು ತೆರಿಗೆ ಸೇರಿದ ಮೊತ್ತ ಪಾವತಿಸಬೇಕಾಗುತ್ತದೆ. ಅದೇ ರೀತಿ, ನಿಮ್ಮ ಸಮ್ ಇನ್ಷೂರ್ಡ್ 50 ಲಕ್ಷ ರೂಪಾಯಿ ಆದರೆ ಪ್ರೀಮಿಯಂ ಮೊತ್ತ 31 ಸಾವಿರದ 500 ರೂಪಾಯಿ ಪ್ಲಸ್ ಟ್ಯಾಕ್ಸ್ ನಷ್ಟಾಗುತ್ತದೆ.
ಅದೇ ರೀತಿ, ಡಿಜಿಟಲ್ ಇನ್ಷುರೆನ್ಸ್ ನ ಹೋಂ ಕಂಟೆಂಟ್ ಪಾಲಿಸಿಯಡಿ, ಒಂದು ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿವರೆಗೂ ಸಮ್ ಇನ್ಷೂರ್ಡ್ ಗೆ ಪಾಲಿಸಿ ಸಿಗುತ್ತದೆ. ಇದರಡಿ, ಹತ್ತು ಲಕ್ಷ ರೂಪಾಯಿಗೆ ವಾರ್ಷಿಕ ಪ್ರೀಮಿಯಂ ದರ 1 ಸಾವಿರದ 346 ರೂಪಾಯಿ ಹಾಗೇ 50 ಲಕ್ಷ ರೂಪಾಯಿ ಸಮ್ ಇನ್ಷೂರ್ಡ್ ಗೆ ಪ್ರೀಮಿಯಂ ಮೊತ್ತ 4 ಸಾವಿರದ 982 ರೂಪಾಯಿಯಷ್ಟಿದೆ.
ಈ ರೀತಿಯ ಪಾಲಿಸಿ ತೆಗೆದುಕೊಳ್ಳಬೇಕು ಎನ್ನುವುದು ಸರಿಯಾದ ನಿರ್ಧಾರ. ಇದರಿಂದಾಗಿ ನೀವು ಪ್ರಮುಖ ನಷ್ಟಗಳಿಂದ ಪಾರಾಗಬಹುದಾಗಿದೆ. ಅಂದರೆ ಕಳ್ಳತನ, ಪ್ರಾಕೃತಿಕ ವಿಕೋಪ ಇತ್ಯಾದಿ ಸಂದರ್ಭದಲ್ಲಿ ಆಗುವ ನಷ್ಟ ತಪ್ಪಿಸಿಕೊಳ್ಳಬಹುದು. ಆದರೆ ಪಾಲಿಸಿ ತೆಗೆದುಕೊಳ್ಳುವುದಕ್ಕೂ ಮೊದಲು, ಅದರ ಷರತ್ತು ಮತ್ತು ನಿಬಂಧನೆ ಸರಿಯಾಗಿ ತಿಳಿದುಕೊಳ್ಳಿ. ಆಗ ಮಾತ್ರ ನೀವು ನಿಮಗೆ ಸೂಕ್ತವಾದ ಉತ್ತಮ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ