` how missing emi impacts your credit score | EMI ಮಿಸ್​ ಮಾಡಿಕೊಂಡರೆ ನಿಮಗೆ ಇಷ್ಟೆಲ್ಲಾ ನಷ್ಟ! | Money9 Kannada

EMI ಮಿಸ್​ ಮಾಡಿಕೊಂಡರೆ ನಿಮಗೆ ಇಷ್ಟೆಲ್ಲಾ ನಷ್ಟ!

ಪರ್ಸನಲ್ ಲೋನ್ ಮರುಪಾವತಿ 90 ದಿನಗಳನ್ನು ಮೀರಿದರೆ, ಬಾಕಿ ಮೊತ್ತವನ್ನು ಮರುಪಡೆಯಲು ಬ್ಯಾಂಕ್‌ಗಳು ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಮೇಲೆ ಕೇಸ್ ಹಾಕಬಹುದು.. ಆಗ ಕೋರ್ಟ್ ಸಾಲವನ್ನು ಮರುಪಾವತಿಸಲು ನಿಮಗೆ ಆದೇಶಿಸಬಹುದು ಅಥವಾ ಬಾಕಿ ಮೊತ್ತವನ್ನು ಮರುಪಡೆಯಲು ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಆದೇಶಿಸಬಹುದು.

ಲೋನ್ ಪಡೆದುಕೊಳ್ಳೋದು ತುಂಬಾ ಸುಲಭ ಅಂತ ಮಹೇಂದ್ರ ತಿಳಿದುಕೊಂಡಿದ್ದರು. ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಯಾವಾಗಲೂ ಪರ್ಸನಲ್ ಲೋನ್ ನೀಡಲು ಕಾಯುತ್ತಿರುತ್ತವೆ. ಯಾರನ್ನಾದರೂ ಸ್ನೇಹಿತರು ಸಾಲ ಬೇಕು ಅಂತ ಕೇಳಿದರೆ ಮಹೇಂದ್ರ ಅವರು ಲೋನ್ ಪಡೆದು ಅವರಿಗೆ ಸಹಾಯ ಮಾಡುತ್ತಿದ್ದರು. ಕೆಲವು ತಿಂಗಳಿಂದ ಕಂತುಗಳು ಬರುತ್ತಲೇ ಇದ್ದವು, ಮಹೇಂದ್ರ ಸಾಲವನ್ನು ಮರುಪಾವತಿ ಮಾಡುತ್ತಲೇ ಇದ್ದರು. ಆದರೆ ಒಂದು ದಿನ ಸ್ನೇಹಿತರಿಂದ ಕಂತು ಬರುವುದು ನಿಂತಿತು. ಮಹೇಂದ್ರನಿಗೆ ಚಿಂತೆ ಶುರುವಾಯಿತು. EMI ಪಾವತಿಸದಿದ್ದರೆ ಏನಾಗುತ್ತದೆ? ನೋಡಿ ಸಾಲ ತೆಗೆದುಕೊಳ್ಳುವುದು ಸುಲಭ. ಆದರೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದು ಅಷ್ಟೇ ಕಷ್ಟ. ಉದ್ಯೋಗ ಕಳೆದುಕೊಳ್ಳುವುದು, ವೈದ್ಯಕೀಯ ತುರ್ತು ಸ್ಥಿತಿಗಳಂತಹ ವಿವಿಧ ಕಾರಣಗಳಿಂದಾಗಿ EMI ಕಟ್ಟೋದು ಕೊಂಚ ಸಮಸ್ಯೆಯಾಗಬಹುದು. ಒಂದು ವೇಳೆ ನೀವು EMI ಪಾವತಿಯನ್ನ ಮಿಸ್ ಮಾಡಿಕೊಂಡರೆ ಏನಾಗುತ್ತದೆ ಎನ್ನುವುದನ್ನು ಇಲ್ಲಿ ನೋಡೋಣ.

ಸಾಲದ EMI ಪಾವತಿ ಮಾಡದೇ ಇರುವುದನ್ನು ದೊಡ್ಡ ಅಥವಾ ಸಣ್ಣ ಡೀಫಾಲ್ಟ್ ಅಂತ ಹೇಳಬಹುದು. ಒಂದು ಅಥವಾ ಎರಡು ಕಂತುಗಳು ತಪ್ಪಿಹೋದರೆ, ಅಂದರೆ ಕೊನೆಯ ಪಾವತಿಯ 90 ದಿನಗಳಲ್ಲಿ ಎರಡನೇ ಕಂತನ್ನು ಪಾವತಿಸಿದರೆ, ಅದನ್ನು ಸಣ್ಣ ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಆದರೆ 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ EMI ಪಾವತಿಸದಿದ್ದರೆ, ಅಂದರೆ ಮೂರು ತಿಂಗಳಿಗಿಂತ ಹೆಚ್ಚು ಕಾಲ, ಅದನ್ನ ದೊಡ್ಡ ಡೀಫಾಲ್ಟ್ ಅಂತ ಪರಿಗಣಿಸಲಾಗುತ್ತದೆ. ನಿಜವಾದ ತೊಂದರೆ ಇಲ್ಲಿಂದ ಶುರುವಾಗುತ್ತದೆ. ಏಕೆಂದರೆ ಬ್ಯಾಂಕುಗಳು ಅಂತಹ ಸಾಲಗಳನ್ನು NPA ಗಳು ಅಂದ್ರೆ ನಾನ್ ಪರ್ಫಾಮಿಂಗ್ ಅಸೆಟ್ ಅಡಿಯಲ್ಲಿ ಸೇರಿಸುತ್ತವೆ.

ಒಂದು ವೇಳೆ ಮೊದಲ EMI ಪಾವತಿ ಮಾಡುವುದನ್ನು ಮಿಸ್ ಮಾಡಿಕೊಂಡರೆ ಆಗ ಬ್ಯಾಂಕ್ ಫೋನ್ ಕರೆ, ಮೆಸೇಜ್ ಅಥವಾ ಇಮೇಲ್ ಮೂಲಕ ಕಂತು ಮರುಪಾವತಿ ಮಾಡುವಂತೆ ನೆನೆಪಿಸುತ್ತದೆ. EMI ಪಾವತಿಸುವಲ್ಲಿ ವಿಳಂಬ ಮಾಡಿದರೆ ಅದು ಪೆನಾಲ್ಟಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ EMI ಮೊತ್ತದ ಶೇಕಡಾ 1 ರಿಂದ 2 ರಷ್ಟಿರುತ್ತೆ. ಅಲ್ಲದೇ ಹೆಚ್ಚುವರಿಯಾಗಿ, ದಂಡದ ಬಡ್ಡಿಯನ್ನು ಸಹ ವಿಧಿಸಬಹುದು. ಇದನ್ನು ಸಾಲದ ಬಡ್ಡಿದರದ ಮೇಲೆ ವಿಧಿಸಲಾಗುತ್ತದೆ. ಒಮ್ಮೆ ಈ ಪಾವತಿಯನ್ನು ಮಾಡಿದ ನಂತರ, ಸಾಲದ ಖಾತೆಯು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ನೀವು ದೀರ್ಘಕಾಲದವರೆಗೆ ಇಎಂಐ ಪಾವತಿಸದಿದ್ದರೆ, ದಂಡಗಳು ಹೆಚ್ಚಾಗುತ್ತಿರುತ್ತವೆ.

EMI ಡೀಫಾಲ್ಟ್ ಮಾಹಿತಿಯು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ದಾಖಲಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಒಂದು EMI ಅನ್ನು ಕಳೆದುಕೊಂಡರೆ ನಿಮ್ಮ ಕ್ರೆಡಿಟ್ ಸ್ಕೋರ್ 50-70 ಅಂಕ ಕಡಿಮೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಇದನ್ನು ಹಾಗೇ ಮುಂದುವರಿಸಿದರೆ ಕ್ರೆಡಿಟ್ ಸ್ಕೋರ್ ಮೇಲೆ ದೊಡ್ಡ ಪರಿಣಾಮ ಉಂಟಾಗುತ್ತದೆ. ಇದರಿಂದ ನಿಮಗೆ ಲೋನ್ ಪಡೆದುಕೊಳ್ಳಲು ಸುಲಭವಾಗುವುದಿಲ್ಲ.

ಕ್ರೆಡಿಟ್ ಸ್ಕೋರ್‌ ಕಡಿಮೆ ಇದ್ದರೆ ಆಗ ಸುಲಭವಾಗಿ ಸಾಲ ಸಿಗೋದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಆಗ ಬ್ಯಾಂಕ್ ಗಳು ಸಾಲ ನೀಡುವುದಕ್ಕೆ ಹಿಂದೇಟು ಹಾಕುತ್ತದೆ. ಒಂದು ವೇಳೆ ಸಣ್ಣ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಲೋನ್ ನೀಡಲು ಮುಂದಾದರೂ ಕೂಡ ಅವರು ಸಾಮಾನ್ಯ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿದರ ವಿಧಿಸುತ್ತಾರೆ..

ನೀವು ಸಮಯಕ್ಕೆ ಕಂತು ಪಾವತಿಸದಿದ್ದರೆ, ಆಗ ಏಜೆಂಟ್ ಗಳು ನಿಮ್ಮನ್ನು ಸಂಪರ್ಕಿಸುತ್ತಾರೆ. ಅಲ್ಲದೇ ಈ ರಿಕವರಿ ಏಜೆಂಟ್‌ಗಳು ಸಾಲದ ಮೊತ್ತವನ್ನು ಸಂಗ್ರಹಿಸಲು ನಿಮ್ಮ ಕಚೇರಿ ಮತ್ತು ಮನೆಗೆ ಬರುವಂತೆ ಬೆದರಿಕೆ ಹಾಕುತ್ತಾರೆ. ಒಂದು ದಿನದಲ್ಲಿ ನೂರಾರು ಕರೆಗಳ ಮೂಲಕ ಅವರು ನಿಮ್ಮನ್ನು ಪೀಡಿಸುತ್ತಾರೆ.. ಈಗಾಗಲೇ ರಿಕಕವರಿ ಏಜೆಂಟ್ ಗಳು ಅನುಚಿತವಾಗಿ ವರ್ತಿಸ್ತಾರೆ ಅನ್ನೋದ್ರ ಬಗ್ಗೆ ಹಲವಾರು ದೂರುಗಳಿವೆ. ಇಂತಹ ಸಂದರ್ಭಗಳಲ್ಲಿ ನೀವು ಪೊಲೀಸರಿಗೆ ದೂರು ನೀಡಬಹುದು.

ಪರ್ಸನಲ್ ಲೋನ್ ಮರುಪಾವತಿ 90 ದಿನಗಳನ್ನು ಮೀರಿದರೆ, ಬಾಕಿ ಮೊತ್ತವನ್ನು ಮರುಪಡೆಯಲು ಬ್ಯಾಂಕ್‌ಗಳು ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಮೇಲೆ ಕೇಸ್ ಹಾಕಬಹುದು.. ಆಗ ಕೋರ್ಟ್ ಸಾಲವನ್ನು ಮರುಪಾವತಿಸಲು ನಿಮಗೆ ಆದೇಶಿಸಬಹುದು ಅಥವಾ ಬಾಕಿ ಮೊತ್ತವನ್ನು ಮರುಪಡೆಯಲು ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಆದೇಶಿಸಬಹುದು.

ಈಗ ಮಹೇಂದ್ರ ಅವರು ತಮ್ಮ ಹೆಸರಿನಲ್ಲಿ ಯಾರಿಗೂ ಸಾಲ ನೀಡುವ ತಪ್ಪನ್ನ ಎಂದಿಗೂ ಮಾಡೋದಿಲ್ಲ.. ನೀವೂ ಕೂಡ ಈ ತಪ್ಪನ್ನು ಮಾಡಬೇಡಿ. ಇಲ್ಲದಿದ್ದರೆ ಈ ಸಾಲದ ಸುಳಿಯಲ್ಲಿ ನೀವು ಬೀಳಬಹುದು.. ನಾವು ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಮುಂತಾದ ಅನ್ ಸೆಕ್ಯೂರ್ಡ್ ಲೋನ್ ಬಗ್ಗೆ ಮಾತನಾಡಿದ್ದೇವೆ. ಈಗ ಸೆಕ್ಯೂರ್ಡ್ ಲೋನ್ ಗಳ ಬಗ್ಗೆ ಮಾತನಾಡೋಣ.. ಸೆಕ್ಯೂರ್ಡ್ ಲೋನ್‌ಗಳಲ್ಲಿ ವಸೂಲಾತಿ ಹೇಗೆ? ಬನ್ನಿ ತಿಳಿದುಕೊಳ್ಳೋಣ..

ಸುರಕ್ಷಿತ ಸಾಲಕ್ಕೆ ಆಸ್ತಿಯನ್ನ ಮೇಲಾಧಾರ ಅಂದ್ರೆ ಆಸ್ತಿಯನ್ನು ಅಡಮಾನ ಇಡಬೇಕಾಗುತ್ತೆ.. ಗೃಹ ಸಾಲ, ಕಾರು ಸಾಲ, ಆಸ್ತಿಯ ಮೇಲಿನ ಸಾಲ… ಗೃಹ ಸಾಲ ತೆಗೆದುಕೊಳ್ಳುವಾಗ, ಮನೆಯ ದಾಖಲೆಗಳು ಬ್ಯಾಂಕ್‌ನಲ್ಲಿ ಅಡವಿಡಬೇಕು.. ಸಾಲ ಮರುಪಾವತಿ ಮಾಡಿದ ನಂತರ, ಬ್ಯಾಂಕ್ ನಿಮಗೆ ದಾಖಲೆಗಳನ್ನು ಹಸ್ತಾಂತರಿಸುತ್ತೆ..

ಹೋಮ್ ಲೋನ್ EMI ಅನ್ನು ಸತತ ಮೂರು ತಿಂಗಳುಗಳಿಗಿಂತ ಹೆಚ್ಚು ಅಂದರೆ 90 ದಿನಗಳವರೆಗೆ ಪಾವತಿಸದಿದ್ದರೆ, ಬ್ಯಾಂಕ್‌ಗಳು ಸಾಲವನ್ನು NPA ಎಂದು ಘೋಷಿಸುತ್ತವೆ. NPA ಎಂದು ಘೋಷಿಸಿದ ನಂತರ, SARFAESI ಕಾಯಿದೆಯ ಅಡಿಯಲ್ಲಿ ನಿಮಗೆ ನೋಟಿಸ್ ನೀಡಲಾಗುತ್ತೆ. ಸಾಲಗಾರನು ನೋಟೀಸ್ ದಿನಾಂಕದಿಂದ 60 ದಿನಗಳಲ್ಲಿ ಬಾಕಿ ಮೊತ್ತವನ್ನು ಮರುಪಾವತಿಸಬೇಕು. ಈ ಅವಧಿಯ ನಂತರವೂ ನೀವು ಹಣವನ್ನು ಪಾವತಿಸದಿದ್ದರೆ, ಬ್ಯಾಂಕ್ ನಿಮ್ಮ ಆಸ್ತಿಯನ್ನು ಹರಾಜು ಹಾಕಿ ತಮ್ಮ ಹಣ ಹಿಂಪಡೆದುಕೊಳ್ಳಬಹುದು.. ಇದರಿಂದ ನೀವು ಆಸ್ತಿಯನ್ನ ಕಳೆದುಕೊಳ್ಳಬಹುದು..

ನೀವು ಆರಾಮವಾಗಿ ಮರುಪಾವತಿ ಮಾಡಲು ಎಷ್ಟು ಸಾಧ್ಯವೋ ಅಷ್ಟೇ ಮೊತ್ತವನ್ನ ಮಾತ್ರ ಸಾಲವಾಗಿ ತೆಗೆದುಕೊಳ್ಳಿ. ಯಾವುದೇ ಹಣಕಾಸಿನ ಸಮಸ್ಯೆಗಳಿದ್ದಲ್ಲಿ, ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಸಾಲದ ಪುನರ್ ರಚನೆ, ಸಾಲದ ಅವಧಿಯನ್ನು ಹೆಚ್ಚಿಸುವುದು, EMI ಅನ್ನು ಕಡಿಮೆ ಮಾಡುವುದು ಅಥವಾ ಗ್ರೇಸ್ ಅವಧಿಯನ್ನು ಕೇಳುವ ಮೂಲಕ ನೀವು ಸಾಲವನ್ನು ಡೀಫಾಲ್ಟ್ ಮಾಡದಂತೆ ಚರ್ಚಿಸಿ. ನಿಮ್ಮ ಉಳಿತಾಯದ ಕಡೆ ಗಮನಕೊಡುವ ಮೂಲಕ ಅಥವಾ ಸ್ನೇಹಿತರು ಮತ್ತು ಪರಿಚಯಸ್ಥರಿಂದ ಹಣವನ್ನು ಪಡೆಯುವ ಮೂಲಕ ನೀವು ಸಾಲದ ಹೊರೆಯನ್ನು ಕಡಿಮೆ ಮಾಡಬಹುದು. ಮತ್ತು ತುರ್ತು ನಿಧಿಯನ್ನು ರಚಿಸಿಕೊಳ್ಳಿ. 6 ರಿಂದ 12 ತಿಂಗಳ ಸಂಬಳಕ್ಕೆ ಸಮನಾದ ಮೊತ್ತವನ್ನು ಅದರಲ್ಲಿ ಇರಿಸಿ ಇದರಿಂದ ನೀವು ಕಷ್ಟದ ಸಮಯದಲ್ಲಿ ಅದನ್ನು ಬಳಸಿಕೊಳ್ಳಬಹುದು.

Published: April 1, 2024, 10:38 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ