ಕೋಟಕ್ ಮಹೀಂದ್ರಾಗೆ ಬ್ರೇಕ್, ಇನ್ನೂ ಮಾಡಿಲ್ವಾ ಪ್ಯಾನ್-ಆಧಾರ್ ಲಿಂಕ್?

ನೀವು ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದಾದರೆ ಈ ಸುದ್ದಿ ಕೇಳಿದ ಮೇಲೆ ಖಂಡಿತಾ ಲಿಂಕ್ ಮಾಡಿಕೊಳ್ತೀರಿ... ಟಿಡಿಎಸ್, ಟಿಸಿಎಸ್ ಕಡಿತಕ್ಕೆ ಸಂಬಂಧಿಸಿದಂತೆ ತೆರಿಗೆದಾರರು ಹಾಗೂ ಉದ್ಯಮಿಗಳಿಗೆ ಆದಾಯ ತೆರಿಗೆ ಇಲಾಖೆ ಬಿಗ್ ರಿಲೀಫ್ ನೀಡಿದೆ.

alternate

ಒಂದು ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚ 27% ಹೆಚ್ಚಳ
2023-24 ರ ಫೈನಾನ್ಷಿಯಲ್ ಇಯರ್‌ನಲ್ಲಿ, ಕ್ರೆಡಿಟ್ ಕಾರ್ಡ್ ವೆಚ್ಚ ವಾರ್ಷಿಕವಾಗಿ 27 ಪರ್ಸೆಂಟ್ ಏರಿಕೆಯಾಗಿ, 18.26 ಲಕ್ಷ ಕೋಟಿ ರೂ. ತಲುಪಿದೆ. ಒಂದು ವರ್ಷದ ಹಿಂದೆ ಸುಮಾರು 14 ಲಕ್ಷ ಕೋಟಿ ಆಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಹೊಸ ಮಾಹಿತಿಯ ಪ್ರಕಾರ, ಮಾರ್ಚ್ 2024 ರಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚ ಶೇಕಡಾ 10.07 ಏರಿಕೆಯಾಗಿ 1.64 ಲಕ್ಷ ಕೋಟಿ ರೂ. ಗೆ ತಲುಪಿತ್ತು. ಮಾರ್ಚ್‌ನಲ್ಲಿ, ಹಬ್ಬದ ಸೀಸನ್ ಇತ್ತು. ಜೊತೆಗೆ ಆರ್ಥಿಕ ವರ್ಷವೂ ಕೊನೆಯಾಗುತ್ತಿತ್ತು. ಹೀಗಾಗಿ, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಹೆಚ್ಚು ಖರ್ಚು ಮಾಡಲಾಗಿತ್ತು. ಫೆಬ್ರವರಿ 2024 ರಲ್ಲಿ ಕ್ರೆಡಿಟ್ ಕಾರ್ಡ್ ಖರ್ಚು 1.49 ಲಕ್ಷ ಕೋಟಿ ರೂ. ಆಗಿತ್ತು. ಎಚ್ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಮಾರ್ಚ್‌ನಲ್ಲಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಹಿವಾಟು ಶೇಕಡಾ 8.57 ರಷ್ಟು ಏರಿಕೆಯಾಗಿ 43,471.29 ಕೋಟಿ ರೂ.ಗೆ ತಲುಪಿದೆ. ಫೆಬ್ರವರಿಯಲ್ಲಿ 40288.51 ಕೋಟಿ ರೂ. ಆಗಿತ್ತು.

ಬುಲೆಟ್ ಟ್ರೇನ್ ಪ್ರಾಜೆಕ್ಟ್ ಕಂಪ್ಲೀಟ್ ಆಗೋದು ಯಾವಾಗ?
‘ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್’ ಅಂದರೆ ಬುಲೆಟ್ ರೈಲಿನ ಪ್ರಾಜೆಕ್ಟ್ ಮಾಡುತ್ತಿರುವ ಎನ್‌ಎಚ್‌ಎಸ್‌ಆರ್‌ಸಿಎಲ್, ಆರ್‌ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಬುಲೆಟ್ ಟ್ರೈನ್ ಯೋಜನೆ ಯಾವಾಗ ಮುಗಿಯುತ್ತದೆ ಎಂಬ ಮಾಹಿತಿಯನ್ನು ಎಲ್ಲ ಕಾಂಟ್ರಾಕ್ಟ್‌ ಇಶ್ಯೂ ಮಾಡಿದ ಮೇಲೆ ತಿಳಿಸಲಾಗುವುದು ಎಂದು ಹೇಳಿದೆ. ಅಹಮದಾಬಾದ್ ಮತ್ತು ಮುಂಬೈ ನಡುವೆ 508 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಿಸುತ್ತಿರುವ NHSRCL ಗೆ ಇನ್ನೂ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಅಗತ್ಯವಿರುವ ಟೆಂಡರ್‌ ಪ್ರಕ್ರಿಯೆ ಮುಗಿಸಿಲ್ಲ. ಆದರೆ, ಬುಲೆಟ್ ಟ್ರೈನ್ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, 163 ಕಿ.ಮೀ ‘ವಯಡಕ್ಟ್’, 302 ಕಿ.ಮೀ ‘ಪೈಯರ್’ ಮತ್ತು 323 ಕಿ.ಮೀ ‘ಫೌಂಡೇಶನ್’ ನಿರ್ಮಿಸಲಾಗಿದೆ ಎಂದು ಯೋಜನೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ… ಈ ಯೋಜನೆ 2017 ರಲ್ಲಿ ಪ್ರಾರಂಭವಾಗಿತ್ತು. ಡಿಸೆಂಬರ್ 2023 ರೊಳಗೆ ಸಿದ್ಧವಾಗಬೇಕಿತ್ತು… RTI ಗೆ ನೀಡಿದ ಪ್ರತಿಕ್ರಿಯೆಯಲ್ಲಿ, 2026-27 ರ ವೇಳೆಗೆ ಪೂರ್ಣಗೊಳಿಸುವ ಯೋಜನೆ ಇದೆ ಎಂದು ತಿಳಿದುಬಂದಿದೆ.

ಕಡಿಮೆ ಟಿಡಿಎಸ್ ಕಟ್ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.
ನೀವು ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದಾದರೆ ಈ ಸುದ್ದಿ ಕೇಳಿದ ಮೇಲೆ ಖಂಡಿತಾ ಲಿಂಕ್ ಮಾಡಿಕೊಳ್ತೀರಿ… ಟಿಡಿಎಸ್, ಟಿಸಿಎಸ್ ಕಡಿತಕ್ಕೆ ಸಂಬಂಧಿಸಿದಂತೆ ತೆರಿಗೆದಾರರು ಹಾಗೂ ಉದ್ಯಮಿಗಳಿಗೆ ಆದಾಯ ತೆರಿಗೆ ಇಲಾಖೆ ಬಿಗ್ ರಿಲೀಫ್ ನೀಡಿದೆ. ಮೇ 31, 2024 ರೊಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿದ್ದರೆ, ತೆರಿಗೆದಾರರು ಮತ್ತು ಉದ್ಯಮಿಗಳ ಮೇಲೆ ಟಿಡಿಎಸ್ ಕಡಿತದ ವಿಷಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, ದುಪ್ಪಟ್ಟು ದರದಲ್ಲಿ ಟಿಡಿಎಸ್ ಕಟ್ ಮಾಡಲಾಗುತ್ತದೆ. ಆದರೆ, ಮೇ 31 ರೊಳಗೆ ತಮ್ಮ ಪ್ಯಾನ್ -ಆಧಾರ್‌ ಲಿಂಕ್ ಮಾಡುವ ತೆರಿಗೆದಾರರಿಗೆ ಪರಿಹಾರ ನೀಡುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ಆರ್‌ಬಿಐ ಬ್ರೇಕ್
ಕೊಟಕ್ ಮಹೀಂದ್ರಾ ಬ್ಯಾಂಕ್‌ಗೆ ಹೊಸ ಕ್ರೆಡಿಟ್ ಕಾರ್ಡ್‌ ವಿತರಿಸದಂತೆ ಮತ್ತು ಆನ್‌ಲೈನ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಹೊಸ ಗ್ರಾಹಕರ ಸೇರ್ಪಡೆಯನ್ನು ತಕ್ಷಣವೇ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. 2022 ರಿಂದಲೂ ಬ್ಯಾಂಕ್‌ ಬಳಿ ಸಾಕಷ್ಟು ಐಟಿ ಇನ್‌ಫ್ರಾಸ್ಟ್ರಕ್ಚರ್ ಇಲ್ಲ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿತ್ತು. ಅಷ್ಟಾಗಿಯೂ, ಈ ಸಮಸ್ಯೆ ಪರಿಹಾರಕ್ಕೆ ಬ್ಯಾಂಕ್ ಸತತವಾಗಿ ವಿಫಲವಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಸೆಕ್ಷನ್ 35 ಎ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು, ಆರ್‌ಬಿಐ ಕೋಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ಈ ಕ್ರಮ ಕೈಗೊಂಡಿದೆ. ಆದರೆ, ಈಗಾಗಲೇ ಬ್ಯಾಂಕಿನ ಗ್ರಾಹಕರಾಗಿರುವವರು ಮೊದಲಿನಂತೆ ಎಲ್ಲ ಸೇವೆಗಳನ್ನು ಪಡೆಯುತ್ತಲೇ ಇರುತ್ತಾರೆ.

ರೈಲ್ವೆ ನಿಲ್ದಾಣಗಳಲ್ಲಿ ಕೇವಲ 20 ರೂ.ಗೆ ಆಹಾರ ಸೌಲಭ್ಯ
ಭಾರತೀಯ ರೈಲ್ವೇ ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಎಕಾನಮಿ ಮೀಲ್‌ ಶುರು ಮಾಡಿದೆ. ಅಂದರೆ 20 ರೂ.ಗೆ ಪ್ರಯಾಣಿಕರಿಗೆ ಊಟ ಸಿಗುತ್ತದೆ. ಪ್ಲಾಟ್ಫಾರಂನಲ್ಲಿ ಇದಕ್ಕೆಂದೇ ಪ್ರತ್ಯೇಕ ಸ್ಟಾಲ್‌ ಹಾಕಲಾಗಿದೆ. ಇದಲ್ಲದೆ, ಪ್ರಯಾಣಿಕರು ಚೋಲೆ ಬಟೂರೆಯಿಂದ ಮಸಾಲೆ ದೋಸೆಯವರೆಗೆ ವಿಭಿನ್ನ ತಿಂಡಿ ತಿನಿಸುಗಳು ಇರುತ್ತವೆ. ಭಾರತೀಯ ರೈಲ್ವೆಯು IRCTC ಸಹಯೋಗದೊಂದಿಗೆ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ರೈಲ್ವೆ ಹೇಳುವ ಪ್ರಕಾರ, ಸದ್ಯ 100 ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 150 ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಸೆಟಪ್‌ ಮಾಡಲಾಗಿದೆ. ಜನರಲ್ ಕ್ಲಾಸ್ ಎದುರಿಗೇ ಈ ಸ್ಟಾಲ್‌ಗಳನ್ನು ಹಾಕಲಾಗುತ್ತಿದೆ. ಇದರಿಂದ ಈ ಕ್ಲಾಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ತಿಂಡಿ ತಿನಿಸುಗಳು ಸಿಗುತ್ತವೆ. ಪ್ರಯಾಣಿಕರಿಗೆ ಎರಡು ರೀತಿಯ ಆಯ್ಕೆಗಳಿರುತ್ತವೆ. ಮೊದಲಿಗೆ 20 ರೂ.ನಲ್ಲಿ ಪ್ರಯಾಣಿಕರಿಗೆ 7 ಪೂರಿ, 150 ಗ್ರಾಂ ತರಕಾರಿ ಮತ್ತು ಉಪ್ಪಿನಕಾಯಿ ಪ್ಯಾಕೆಟ್ ಸಿಗುತ್ತದೆ. ಎರಡನೆಯದಾಗಿ, 50 ರೂ.ಗೆ ನೀವು ರಾಜ್ಮಾ-ರೈಸ್, ಖಿಚಡಿ/ಪೊಂಗಲ್, ಕುಲ್ಚಾ-ಚೋಲೆ, ಚೋಲೆ-ಭಟೂರೆ, ಪಾವ್ ಭಾಜಿ ಅಥವಾ ಮಸಾಲೆ ದೋಸೆಯಂತಹ ಯಾವ ಐಟಂ ಅನ್ನು ಬೇಕಾದರೂ ಖರೀದಿಸಬಹುದು. ಇದಲ್ಲದೆ, ಪ್ರಯಾಣಿಕರಿಗೆ 200 ಎಂಎಂ ಪ್ಯಾಕೇಜ್ಡ್ ಸೀಲ್ಡ್ ವಾಟರ್ ಗ್ಲಾಸ್‌ಗಳೂ ಸಿಗುತ್ತವೆ. ಇದರ ಬೆಲೆ 3 ರೂ. ಇದೆ.

ಡೇಟಾ ಬಳಕೆಯಲ್ಲಿ ಜಿಯೋ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್
ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಡೇಟಾ ಬಳಕೆಯ ವಿಷಯದಲ್ಲಿ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿದೆ. ಚೀನಾ ಮೊಬೈಲ್ ಅನ್ನು ಹಿಂದಿಕ್ಕಿದ ಜಿಯೋ ಈ ಸ್ಥಾನಕ್ಕೇರಿದೆ. ಜಾಗತಿಕ ವಿಶ್ಲೇಷಣಾ ಸಂಸ್ಥೆ ಎಫಿಶಿಯೆಂಟ್‌ನ ವರದಿಯ ಪ್ರಕಾರ, Q4 FY24 ರ ಕೊನೆಯ ತ್ರೈಮಾಸಿಕದಲ್ಲಿ ಜಿಯೋದ ಒಟ್ಟು ಡೇಟಾ ಟ್ರಾಫಿಕ್ 40.9 ಎಕ್ಸಾಬೈಟ್‌ ಆಗಿದೆ. ಅದೇ ವೇಳೆ, ಡೇಟಾ ಟ್ರಾಫಿಕ್‌ನಲ್ಲಿ ಈವರೆಗೆ ನಂಬರ್ ಒನ್ ಕಂಪನಿಯಾಗಿದ್ದ ಚೀನಾ ಮೊಬೈಲ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಅದರ ನೆಟ್‌ವರ್ಕ್‌ನಲ್ಲಿ ಡೇಟಾ ಬಳಕೆ ತ್ರೈಮಾಸಿಕದಲ್ಲಿ 40 ಎಕ್ಸಾಬೈಟ್‌ಗಳಿಗಿಂತ ಕಡಿಮೆ ಇದೆ. ಜಾಗತಿಕವಾಗಿ 108 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ ಅತಿ ಹೆಚ್ಚು 5G ಗ್ರಾಹಕರನ್ನು ಹೊಂದಿರುವ ಎರಡನೇ ಟೆಲಿಕಾಂ ಕಂಪನಿಯಾಗಿದೆ. 5G ಬಳಕೆದಾರರು ಈಗ Jio ದ ಒಟ್ಟು ವೈರ್‌ಲೆಸ್ ಡೇಟಾ ಟ್ರಾಫಿಕ್‌ನ 28% ಕ್ಕಿಂತ ಹೆಚ್ಚು ಬಳಸುತ್ತಿದ್ದಾರೆ.

 ಇವಿ ಬೈಕ್ ಬಿಡುಗಡೆ ಮಾಡಿದ ಬೆಂಗಳೂರು ಕಂಪನಿ!
Ultraviolette Automotive ಬುಧವಾರ ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ F77 Mach 2 ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. F77 ನ ಅಪ್‌ಡೇಟೆಡ್‌ ಎಡಿಶನ್‌ Mach 2 ಆಗಿದೆ. F77 ನ 2022 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ ಕಂಪನಿ ಇದಾಗಿದ್ದು, ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿ ಪರಿಚಯಿಸಿದೆ. ಇದು ಉತ್ತಮ ರೇಂಜ್‌, ಹೊಸ ತಂತ್ರಜ್ಞಾನ, ಹೆಚ್ಚಿನ ಪವರ್ ಮತ್ತು ಫೀಚರ್‌ಗಳನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ ಮಾಡಿದಾಗ, ಬೈಕ್ 323 ಕಿ.ಮೀ ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಮ್ಯಾಕ್ 2 ನಲ್ಲಿ ಸ್ಟ್ಯಾಂಡರ್ಡ್ ಮತ್ತು ರೆಕಾನ್ ಎಂಬ ಎರಡು ವೇರಿಯಂಟ್‌ಗಳಿವೆ. 9 ಕಲರ್ ಆಪ್ಷನ್ ಇವೆ. ಸ್ಟ್ಯಾಂಡರ್ಡ್ ವೇರಿಯಂಟ್‌ನ ಎಕ್ಸ್ ಶೋ ರೂಂ ಬೆಲೆ ರೂ. 2.99 ಲಕ್ಷ ಮತ್ತು ರೆಕಾನ್ ವೇರಿಯಂಟ್‌ಗೆ ರೂ. 3.99 ಲಕ್ಷ ಆಗಿದೆ.

Published: April 25, 2024, 14:26 IST

ಕೋಟಕ್ ಮಹೀಂದ್ರಾಗೆ ಬ್ರೇಕ್, ಇನ್ನೂ ಮಾಡಿಲ್ವಾ ಪ್ಯಾನ್-ಆಧಾರ್ ಲಿಂಕ್?