` paytm payments bank and rbi ban what went wrong | ಬ್ಯಾನ್ ಹೇರಿದ ಬಳಿಕ ಪೇಟಿಎಂ ಕತೆ ಏನಾಗಿದೆ? | Money9 Kannada

ಬ್ಯಾನ್ ಹೇರಿದ ಬಳಿಕ ಪೇಟಿಎಂ ಕತೆ ಏನಾಗಿದೆ?

RBI ಬ್ಯಾನ್ ನಿರ್ಧಾರದ ನಂತರ ಫೆಬ್ರವರಿಯಲ್ಲಿ ಕಂಪನಿಯ UPI ವಹಿವಾಟುಗಳ ಸಂಖ್ಯೆಯು 1.44 ಬಿಲಿಯನ್ ನಿಂದ ಸುಮಾರು 1.33 ಬಿಲಿಯನ್ ಗೆ ಇಳಿದಿದೆ. ಅಂದ್ರೆ 7.6% ರಷ್ಟು ಕಡಿಮೆಯಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಸರ್ವೀಸ್ ಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದ ನಂತರ ಒಂದಿಷ್ಟು ಬೆಳವಣಿಗೆಗಳಾಗಿವೆ. ಪೇಟಿಎಂ ಸ್ಟಾಕ್ ಗಳು ಒಂದು ಹಂತದ ಆರಂಭಿಕ ಕುಸಿತ ಕಂಡಿದ್ದರೂ ಸಹ ಇನ್ನೊಂದು ಕಡೆ ಕಂಪನಿಯ ದೊಡ್ಡ ಆದಾಯ ಇದೇ ವಲಯದಿಂದ ಬಂದಿದೆ ಅನ್ನೋದು ಸಹ ಗಮನಿಸಬೇಕಾದ ಸಂಗತಿ. ಪೇಟಿಎಂ ತನ್ನ ವ್ಯವಹಾರದ ಪ್ರಮುಖ ಭಾಗವನ್ನೇ ಕಳೆದುಕೊಂಡಿದ್ದರೂ ಹೂಡಿಕೆದಾರರು ಇನ್ನು ಯಾಕೆ Paytm ಷೇರುಗಳನ್ನು ಖರೀದಿಸುತ್ತಿದ್ದಾರೆ? Paytmನ ವ್ಯಾಲುವೇಶನ್ ಹೇಗೆ ಮಾಡಲಾಗುತ್ತಿದೆ? RBIಯ ಈ ಬ್ಯಾನ್ ನಿರ್ಧಾರದ ನಂತರ Paytm ಷೇರುಗಳಿಗೆ ಬ್ರೋಕರ್‌ಗಳು ಯಾವ ವ್ಯಾಲುವೇಶನ್ ನೀಡುತ್ತಿದ್ದಾರೆ? ಈ ಸ್ಟಾಕ್ ಮೇಲೆ ಯಾವ ರೀತಿಯ ಸ್ಟ್ರಾಟಜಿ ಬಳಸೋದು ಉತ್ತಮ? ಇವತ್ತಿನ ಸಂಚಿಕೆಯಲ್ಲಿ ಈ ಬಗ್ಗೆ ಸಮಗ್ರ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ.

ಪೇಟಿಎಂ ಪೇಮೆಂಟ್ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಕ್ರೆಡಿಟ್ ಮತ್ತು ಡೆಪಾಸಿಟ್ ಟ್ರಾನ್ಸಾಕ್ಷನ್ ಗಳಿಗೆ ಕಳೆದ ಜನವರಿ 31ರಂದು ಆರ್‌ಬಿಐ ನಿಷೇಧ ಹೇರಿತ್ತು. ಇದಲ್ಲದೆ ಫೆ. 29ರಿಂದ Paytm ನ ವ್ಯಾಲೆಟ್, ಫಾಸ್ಟ್ಯಾಗ್ ಮತ್ತು ನ್ಯಾಶನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅಂದ್ರೆ NCMCಯ ಸರ್ವೀಸ್ ಗಳ ಮೇಲೂ ನಿಷೇಧ ಹೇರಲಾಗಿತ್ತು. ಗ್ರಾಹಕರು ತಮ್ಮ ಉಳಿತಾಯ ಖಾತೆ, ಚಾಲ್ತಿ ಖಾತೆ, ಪ್ರಿಪೇಯ್ಡ್ ಖಾತೆ, ಫಾಸ್ಟ್ಯಾಗ್, NCMCಗಳಲ್ಲಿ ಉಳಿದುಕೊಂಡಿದ್ದ ಬ್ಯಾಲೆನ್ಸ್ ವಿತ್ ಡ್ರಾ ಮಾಡಿಕೊಳ್ಳಬೇಕು ಅಂತಾ ಈ ಆರ್ಡರ್ ಹೇಳಿತ್ತು. ಮಾರ್ಚ್ 1 ರಿಂದ ಯಾವುದೇ ವಹಿವಾಟು ಸಾಧ್ಯವಾಗೋದಿಲ್ಲ ಅಂತ ಹೇಳಲಾಗಿತ್ತು. ಇದಾದ ನಂತರ ಈ ಎಲ್ಲ ವಿತ್​ ಡ್ರಾ ವ್ಯವಹಾರಗಳಿಗೆ ನೀಡಿದ್ದ ಟೈಮ್ ಲೈನ್ ಅನ್ನು ಮಾರ್ಚ್ 15 ಕ್ಕೆ ವಿಸ್ತರಿಸಲಾಯಿತು. ನಿಜ ಹೇಳಬೇಕು ಅಂದ್ರೆ Paytm ಪೇಮೆಂಟ್ಸ್ ಬ್ಯಾಂಕ್ ಪೇಟಿಎಂಗೆ ನೋಡಲ್ ಅಕೌಂಟ್ ಗಳನ್ನು ಒದಗಿಸುತ್ತಿತ್ತು. ಡಿಜಿಟಲ್ ವಾಲೆಟ್ ಸೇರಿದಂತೆ ವಿವಿಧ ಡೆಪಾಸಿಟ್ ಸರ್ವೀಸ್ ಗಳಿಗೆ ಈ ಅಕೌಂಟ್ ಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು.

RBI ಆದೇಶದ ನಂತರ ಪೇಮೆಂಟ್ ಬ್ಯಾಂಕ್ ನೊಂದಿಗಿನ ತನ್ನೆಲ್ಲ ವ್ಯವಹಾರಗಳನ್ನು Paytm ನಿಲ್ಲಿಸಿತು. ಈ ಪೇಮೆಂಟ್ ಆ್ಯಪ್ ವ್ಯವಹಾರಕ್ಕಾಗಿ ಪೇಟಿಎಂ, ಥರ್ಡ್ ಪಾರ್ಟಿ ಆ್ಯಪ್ ಪ್ರೊವೈಡರ್ ರೀತಿ ಕಾರ್ಯನಿರ್ವಹಿಸಲು ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಅಂದರೆ NPCIನಿಂದ ಅನುಮೋದನೆಗೆ ಅರ್ಜಿ ಸಲ್ಲಿಸಿತು. ಈ ಅನುಮೋದನೆ ನಂತರ PhonePe ಮತ್ತು Google Pay ರೀತಿ ಪೇಮೆಂಟ್ ಸರ್ವಿಸ್ ಮುಂದದುವರಿಸಿಕೊಳ್ಳಲು ಅವಕಾಶವಾಗುತ್ತದೆ. ಇದೇ ಕಾರಣಕ್ಕೆ ಪೇಟಿಎಂ SBI, YES, Axis, ಮತ್ತು HDFC ಬ್ಯಾಂಕ್ ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಇಷ್ಟೆಲ್ಲಾ ಸರ್ಕಸ್ ಮಾಡಿದ ಕಂಪನಿ ಸುಮಾರು 40 ಮಿಲಿಯನ್ ಮರ್ಚಂಟ್ಸ್ ಮತ್ತು 100 ಮಿಲಿಯನ್ ಗ್ರಾಹಕರ ವ್ಯವಹಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಸಕ್ಸಸ್ ಆಯ್ತು. ಇಷ್ಟೆ ಅಲ್ಲದೆ ತನ್ನ ಮಂತ್ಲಿ ಆಕ್ಟೀವ್ ಯೂಸರ್ ಗಳನ್ನು ಉಳಿಸಿಕೊಳ್ಳಲು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಪೇಮೆಂಟ್ ಡಿವೈಸ್ ಬಳಸುತ್ತಿರುವ ವ್ಯಾಪಾರಿಗಳಿಗೆ ಮಾಸಿಕ ಸಬ್ಸಿಡಿಗಳನ್ನು ನೀಡುತ್ತ ಬರುತ್ತಿದೆ. ಇದು ಕಂಪನಿಯ ಕ್ಯಾಶ್ ಫ್ಲೋ ಮೇಲೆಯೂ ಪರಿಣಾಮ ಬೀರುತ್ತಿದೆ. ಇದಲ್ಲದೆ, ಹಣಕಾಸು ವರ್ಷ 2025 ರಲ್ಲಿ UPI ವಹಿವಾಟುಗಳ ಪ್ರಮಾಣ ಮತ್ತು ಮೌಲ್ಯದಲ್ಲಿ ಕುಸಿತವಾಗುವ ಸಾಧ್ಯತೆಯೂ ಇದೆ. ಹೈ ಮಾರ್ಜಿನ್ ಇಟ್ಟುಕೊಂಡು ಬರುತ್ತಿರುವ ಇ-ವಾಲೆಟ್​ಗಳ ಆದಾಯದ ಮೆಲೂ ಇದು ಪರಿಣಾಮ ಬೀರಬಹುದು.

ಹಾಗಿದ್ದರೆ RBIನ ಈ ನಿರ್ಧಾರವು ಕಂಪನಿಯ ಷೇರುಗಳು ಮತ್ತು ವ್ಯವಹಾರದ ಮೇಲೆ ಯಾವ ಪರಿಣಾಮ ಬೀರುತ್ತಿದೆ? ಬ್ರೋಕರ್ ಗಳು ತಮ್ಮ ಅಭಿಪ್ರಾಯದಲ್ಲಿ ಯಾವ ಬದಲಾವಣೆ ಮಾಡಿಕೊಂಡಿದ್ದಾರೆ? ಈ ಸ್ಟಾಕ್ ಗಳಿಗೆ ಸಂಬಂಧಿಸಿ ಯಾವ ಟಾರ್ಗೆಟ್ ಇಟ್ಟುಕೊಳ್ಳಬಹುದು? ಈ ವಿಚಾರಗಳನ್ನು ನಾವು ನೋಡಬೇಕಾಗುತ್ತದೆ.

ಆರ್ ಬಿಐ ಕ್ರಮ ತೆಗೆದುಕೊಳ್ಳುವುದಕ್ಕೆ ಮುನ್ನ ಅಂದರೆ ಜನವರಿ 31ರಂದು Paytm ಷೇರುಗಳು 761.20 ರೂಪಾಯಿಗೆ ಫ್ಲಾಟ್ ಆಗಿತ್ತು. ಆದರೆ ಮುಂದಿನ ಮೂರು ದಿನಗಳವರೆಗೆ, ಷೇರುಗಳು ನಿರಂತರವಾಗಿ ಲೋವರ್ ಸರ್ಕ್ಯೂಟ್‌ ನಲ್ಲಿ ಟ್ರೇಡ್ ಆದವು. ಫೆಬ್ರುವರಿ 6 ರಂದು ಸ್ಟಾಕ್ 400 ರೂಪಾಯಿಗಿಂತಲೂ ಕೆಳಗಿಳಿಯಿತು ಮತ್ತು ಫೆಬ್ರವರಿ 16 ರಂದು 318.05 ರೂಪಾಯಿಗೆ ತಲುಪಿ ತನ್ನ ಕನಿಷ್ಠ ಮಟ್ಟ ದಾಖಲಿಸಿತು.

RBI ಬ್ಯಾನ್ ಹೇರಿದ ನಂತರ ಬ್ರೋಕರ್ ಗಳು ಸಹ ಸ್ಟಾಕ್ ರೇಟಿಂಗ್ ಮತ್ತು ಟಾರ್ಗೆಟ್ ನಲ್ಲಿ ಮಹತ್ವದ ಬದಲಾವಣೆ ಮಾಡಿರುವುದಕ್ಕೆ ಕಾರಣ ಏನು ಅನ್ನೋದನ್ನು ನೋಡಬೇಕು. ಇದಕ್ಕೆ ಮುಖ್ಯ ಕಾರಣ ಪೇಟಿಎಂನ ಸಮ್ ಆಫ್ ದಿ ಪಾರ್ಟ್ಸ್ ಅಂದ್ರೆ SOTP ವ್ಯಾಲುವೇಶನ್ ನಲ್ಲಿ ಆಗಿರುವ ಬದಲಾವಣೆ. SOTPಅನ್ನು ಸರಳವಾಗಿ ವಿವರಿಬೇಕು ಅಂದರೆ ಪ್ರತಿ ಬಿಸಿನಸ್ ಯೂನಿಟ್ ಮತ್ತು ಅಂಗಸಂಸ್ಥೆ ಎರಡು ಘಟಕಗಳ ಆಧಾರದಲ್ಲಿ ಸ್ಟಾಕ್ ನ ವ್ಯಾಲುವೇಶನ್ ಮಾಡಲಾಗುತ್ತದೆ. ಇದನ್ನು ನಿಮಗೆ ಒಂದು ಉದಾಹರಣೆ ಮೂಲಕ ತಿಳಿಸಿಕೊಡುತ್ತೇವೆ.

ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದ ರಿಸಲ್ಟ್ ನಂತರ ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಸಿಟಿ ಗ್ರೂಪ್ Paytmನ SOTP ಅನ್ನು 1144 ರೂಪಾಯಿಗಳಿಗೆ ವ್ಯಾಲುವೇಶನ್ ಮಾಡಿತ್ತು. ಇದರಲ್ಲಿ ಪೇಮೆಂಟ್ ಸರ್ವೀಸ್ ಗೆ 430 ರೂಪಾಯಿ, ಫೈನಾಶಿಯಲ್ ಸರ್ವೀಸ್ ಗೆ 516 ರೂಪಾಯಿಗಳು, ಕಾಮರ್ಸ್ ಮತ್ತು ಕ್ಲೌಡ್‌ ಅಂದ್ರೆ ಮಾರ್ಕೆಟಿಂಗ್ ಸರ್ವೀಸ್ ಗೆ 78 ರೂಪಾಯಿ, ನೆಟ್ ಕ್ಯಾಶ್ ಮತ್ತು ಇನ್ವೆಸ್ಟ್ ಮೆಂಟ್​ ಗೆ 120 ರೂ.ಗಳು ವ್ಯಾಲುವೇಶನ್ ನಲ್ಲಿ ಸೇರಿಕೊಂಡಿದ್ದವು.

ಕಳೆದ ಜನವರಿ 31 ರಂದು ಆರ್‌ಬಿಐ ಬ್ಯಾನ್ ನಿರ್ಧಾರ ತೆಗೆದುಕೊಂಡ ನಂತರ, ಸಿಟಿ ಗ್ರೂಪ್ ಪೇಟಿಎಂನ ಟಾರ್ಗೆಟ್ ಪ್ರೈಸ್ ನ್ನು 550 ರೂಪಾಯಿಗಳಿಗೆ ಇಳಿಸಿತು. ಪೇಮೆಂಟ್ ಸರವೀಸ್ ಗಳಿಗೆ ಕೇವಲ 200 ರೂಪಾಯಿಗಳು, ಫೈನಾಶಿಯಲ್ ಸರ್ವೀಸ್ ಗೆ 145 ರೂಪಾಯಿಗಳು, ಮಾರ್ಕೆಟಿಂಗ್ ಸರ್ವೀಸ್ ಗೆ 90 ರೂಪಾಯಿ ಮತ್ತು ನೆಟ್ ಕ್ಯಾಶ್ ಮತ್ತು ಹೂಡಿಕೆಗೆ 115 ರೂಪಾಯಿ ವ್ಯಾಲುವೇಶನ್ ಮಾಡಲಾಯಿತು.

ಇದರರ್ಥ ಪೇಮೆಂಟ್ ಸರ್ವೀಸ್ ವ್ಯಾಲ್ಯೂ ಅರ್ಧಕ್ಕಿಂತಲೂ ಹೆಚ್ಚಿನಷ್ಟು ಕಡಿಮೆಯಾಗಿದೆ. ಫೈನಾಶಿಯಲ್ ಸರ್ವೀಸ್ ಮೌಲ್ಯವು ಸುಮಾರು ಮುಕ್ಕಾಲು ಭಾಗ ಕಡಿಮೆಯಾಗಿದೆ. ಈ ಎರಡು ವಿಭಾಗಗಳು ಕಂಪನಿಯ ಒಟ್ಟು ಆದಾಯಕ್ಕೆ 75-80% ಕೊಡುಗೆ ನೀಡುತ್ತ ಬಂದಿವೆ. ಸೆಪ್ಟೆಂಬರ್ 2020 ರಿಂದ ಮಾರ್ಚ್ 2023 ಅವಧಿಯಲ್ಲಿ ಫೈನಾಶಿಯಲ್ ಸರ್ವೀಸ್ ಇನ್ ಕಂ 5% ರಿಂದ 20% ಕ್ಕೆ ಏರಿತ್ತು. ಈ ಬಿಸಿನಸ್ ಮಾರ್ಜಿನ್ 70-90% ನಡುವೆ ಉಳಿದುಕೊಂಡಿದೆ ಎನ್ನುವುದು ಗಮನಿಸಬೇಕಾದ ಅಂಶ. ಇದೇ ಅವಧಿಯಲ್ಲಿ ಪೇಮೆಂಟ್ ಸರ್ವೀಸ್ ಆದಾಯ 71% ರಿಂದ 62% ಕ್ಕೆ ಇಳಿದಿದೆ. ಆದರೆ ಮಾರ್ಜಿನ್ 10% ನಿಂದ 40% ಗೆ ಏರಿಕೆ ಕಂಡಿದೆ.

RBI ಬ್ಯಾನ್ ನಿರ್ಧಾರದ ನಂತರ ಫೆಬ್ರವರಿಯಲ್ಲಿ ಕಂಪನಿಯ UPI ವಹಿವಾಟುಗಳ ಸಂಖ್ಯೆಯು 1.44 ಬಿಲಿಯನ್ ನಿಂದ ಸುಮಾರು 1.33 ಬಿಲಿಯನ್ ಗೆ ಇಳಿದಿದೆ. ಅಂದ್ರೆ 7.6% ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮ ಮಾರುಕಟ್ಟೆ ಪಾಲು ಜನವರಿಯಲ್ಲಿ 11.8% ರಿಂದ 11% ಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಇದು 12.8% ರಷ್ಟಿತ್ತು. ಮತ್ತೊಂದೆಡೆ, ಗೂಗಲ್ ಪೇ ಮತ್ತು ಜಿಯೊದಂತಹ ಕಂಪನಿಗಳಿಂದ ಸ್ಪರ್ಧೆಯು ನಿರಂತರವಾಗಿ ಈ ವಲಯದಲ್ಲಿ ಹೆಚ್ಚುತ್ತಿದೆ. ಈ ಕಂಪನಿಗಳು ಸಹ ಡಿಜಿಟಲ್ ಪೇಮೆಂಟ್ ಸೌಂಡ್ ಬಾಕ್ಸ್ ಹೊರತರುತ್ತಿವೆ. ಇದೇ ಕಾರಣಕ್ಕೆ ಹಲವಾರು ಬ್ರೋಕರ್ ಗಳು ಪೇಟಿಎಂ ಸ್ಟಾಕ್ ಮೇಲಿನ ಟಾರ್ಗೆಟ್ ಕಡಿಮೆ ಮಾಡಿದ್ದಾರೆ.

ಪ್ರಾಫಿಟ್‌ಮಾರ್ಟ್ ಸೆಕ್ಯುರಿಟೀಸ್‌ನ ರಿಸರ್ಚ್ ನಿರ್ದೇಶಕ ಅವಿನಾಶ್ ಗೋರಕ್ಷಕರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲಿನ ಬ್ಯಾನ್ ಕನಿಷ್ಠ 3-4 ತಿಂಗಳುಗಳವರೆಗೆ ಇರುತ್ತದೆ. ಈ ವಿಷಯದ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ಇದಕ್ಕೆ ಸಂಬಂಧಿಸಿದ ಸ್ಟಾಕ್ ಗಳಲ್ಲಿ ಹೊಸ ಹೂಡಿಕೆ ಮಾಡುವುದು ಬೇಡ. ಒಂದು ವೇಳೆ ಈಗಾಗಲೇ ನೀವು ಹೆಚ್ಚಿನ ಬೆಲೆಗೆ ಷೇರನ್ನು ಖರೀದಿಸಿದ್ದರೆ, ನೀವು ಅದನ್ನು ಹೋಲ್ಡ್ ಮಾಡುವುದು ಒಳಿತು.

ಒಟ್ಟಾರೆ ಪೇಮೆಂಟ್ ವಲಯದಲ್ಲಿ ಹೆಚ್ಚುತ್ತಿರುವ ಪೈಪೋಟಿ ಮತ್ತು ಆರ್‌ಬಿಐನ ಕ್ರಮಗಳನ್ನು ಪರಿಗಣಿಸಿ ಇಂಥ ಸ್ಟಾಕ್ ಗಳಿಂದ ದೂರ ಇರುವುದು ಒಳಿತು. ಈ ವಲಯದಲ್ಲಿ ಒಂದು ಸ್ಪಷ್ಟತೆ ಸಿಗುವವರೆಗೂ ಬ್ರೋಕರ್ ಗಳು ಸಹ ಹೆಚ್ಚಿನ ವಿಶ್ವಾಸ ವ್ಯಕತಪಡಿಸುವುದು ಅನುಮಾನ.

Published: April 19, 2024, 11:41 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ