ಹಣಕಾಸು ವರ್ಷ 2023-24 ಕ್ಕೆ ಸಂಬಂಧಿಸಿದ ಹಾಗೇ ನಿಮ್ಮ ತೆರಿಗೆಗಳ ಬಗ್ಗೆ ಪ್ಲಾನ್ ಮಾಡುವುದಕ್ಕೆ ಕೆಲ ದಿನ ಸಹ ಬಾಕಿ ಇಲ್ಲ. ಹಾಗಿದ್ದರೆ ನಿಮಗೆ ಹೊಸ ತೆರಿಗೆ ಪದ್ಧತಿ ಸೂಟ್ ಆಗುತ್ತದೆಯಾ ಇಲ್ಲವಾ ಹಳೆ ತೆರಿಗೆ ಪದ್ಧತಿಯಾ ಅನ್ನೋದನ್ನು ತಿಳಿದುಕೊಳ್ಳಬೇಕಿದೆ. ತೆರಿಗೆ ಉಳಿತಾಯಕ್ಕೆ ಅನೇಕ ಅವಕಾಶಗಳು ಇರುವುದರಿಂದ ಹಳೆಯ ತೆರಿಗೆ ವಿಧಾನವೇ ಜನಪ್ರಿಯವಾಗಿದೆ. ಹಳೆಯ ರಿಜೈಮ್ ನಲ್ಲಿ ಸುಮಾರು 70 ವಿನಾಯಿತಿಗಳು ಮತ್ತು ಕಡಿತಗಳಿವೆ, ಇದರಿಂದ ತೆರಿಗೆಗೆ ಒಳಪಡುವ ಆದಾಯ ಪ್ರಮಾಣ ಮತ್ತು ತೆರಿಗೆ ಮೊತ್ತ ಕಡಿಮೆ ಆಗತ್ತದೆ. ದೀರ್ಘಾವಧಿ ಹೂಡಿಕೆಗಳಿಗೆ ತೆರಿಗೆ ಮುಕ್ತ ರಿಟರ್ನ್ಸ್ ಮೂಲಕ ನಿವೃತ್ತಿಗೆ ಹಣ ಕ್ರೋಢೀಕರಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.
ಹಳೆಯ ಟ್ಯಾಕ್ಸ್ ರಿಜೈಮ್ ನಲ್ಲಿ ವಿನಾಯಿತಿಗಳ ಸಾಮಾನ್ಯ ಸೆಕ್ಷನ್ ಅಂದ್ರೆ ಅದು 80ಸಿ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿವಿಧ ಸ್ಕೀಂಗಳಲ್ಲಿ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಜೀವ ವಿಮೆ ಇತ್ಯಾದಿಗಳಲ್ಲಿ ವಾರ್ಷಿಕವಾಗಿ ಒಂದೂವರೆ ಲಕ್ಷ ರೂಪಾಯಿಯಷ್ಟು ಹೂಡಿಕೆ ಮಾಡಬಹುದು. ಅಲ್ಲದೇ ನ್ಯಾಷನಲ್ ಪೆನ್ಷನ್ ಸ್ಕೀಂ (ಎನ್ ಪಿ ಎಸ್) ಅಡಿಯಲ್ಲಿ ಹೆಚ್ಚುವರಿಯಾಗಿ 50 ಸಾವಿರ ರೂಪಾಯಿಗೆ ವಿನಾಯಿತಿ ಪಡೆಯಬಹುದು. ಹೀಗೆ, ಎರಡು ಲಕ್ಷ ರೂಪಾಯಿವರೆಗಿನ ಹೂಡಿಕೆಯನ್ನ ತೆರಿಗೆ ಪರಿಮಿತಿಯಿಂದ ಹೊರಗಿಡಬಹುದು.
ಇನ್ನು ಸೆಕ್ಷನ್ 80ಡಿ ಅಡಿಯಲ್ಲಿ ಆರೋಗ್ಯ ವಿಮೆ ವಿನಾಯಿತಿ ಸಿಗುತ್ತದೆ . ಸ್ವಯಂ, ಪತಿ ಅಥವಾ ಪತ್ನಿ, ಮಕ್ಕಳಿಗೆ ಆರೋಗ್ಯ ವಿಮೆ ಪಡೆದರೆ, ವಾರ್ಷಿಕ ಪ್ರೀಮಿಯಂ ಮೊತ್ತ 25 ಸಾವಿರ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ ಈ ಮಿತಿ 50 ಸಾವಿರ ರೂಪಾಯಿ. ನೀವು ಮತ್ತು ನಿಮ್ಮ ಪೋಷಕರು, ಇಬ್ಬರೂ ಹಿರಿಯ ನಾಗರಿಕರಾಗಿದ್ದರೆ, ಒಂದು ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು.
ಮನೆ ಬಾಡಿಗೆ ಭತ್ಯೆ – ಎಚ್ ಆರ್ ಎ ಮೂಲಕ ಬಾಡಿಗೆ ಪಾವತಿಗೆ ವಿನಾಯಿತಿ ಸಿಗುತ್ತದೆ. ಆದರೆ ಇದಕ್ಕೆ ಕೆಲವು ಷರತ್ತುಗಳಿವೆ. ಮೊದಲನೆಯದು, ಎಚ್ ಆರ್ ಎ ಆಗಿ ಸಿಗುವ ಮೊತ್ತ. ಎರಡನೆಯದು, ಮೆಟ್ರೋ ನಗರಗಳಾದರೆ ಮೂಲ ವೇತನದ ಶೇಕಡ 50 ರಷ್ಟು ಮತ್ತು ಮೆಟ್ರೋಯೇತರ ನಗರಗಳಾದರೆ ಮೂಲ ವೇತನದ ಶೇಕಡ 40 ರಷ್ಟು. ಇನ್ನು ಮೂರನೆಯದು, ವಾರ್ಷಿಕವಾಗಿ ಪಾವತಿಸಿದ ಬಾಡಿಗೆ ಮೊತ್ತದಲ್ಲಿ ವೇತನದ ಶೇಕಡ 10 ರಷ್ಟನ್ನು ಕಡಿತ ಮಾಡಿದರೆ ಸಿಗುವ ಮೊತ್ತ.
ಈ ಮೂರರಲ್ಲಿ ಯಾವುದು ಕಡಿಮೆಯೊ ಆ ಮೊತ್ತದಷ್ಟು ವಿನಾಯಿತಿ ಸಿಗುತ್ತದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಗೃಹ ಸಾಲದೊಂದಿಗೆ ಮನೆ ಖರೀದಿಗೆ ಕೂಡ ತೆರಿಗೆ ಸೌಲಭ್ಯ ಸಿಗುತ್ತದೆ. ಸೆಕ್ಷನ್ 24(ಬಿ) ಅಡಿಯಲ್ಲಿ ಗೃಹ ಸಾಲದ ಬಡ್ಡಿ ಮೇಲೆ ವಾರ್ಷಿಕವಾಗಿ 2 ಲಕ್ಷ ರೂಪಾಯಿವರೆಗೆ ವಿನಾಯಿತಿ ಸಿಗುತ್ತದೆ. ಅದೇ ರೀತಿ ಪ್ರಿನ್ಸಿಪಲ್ ಮೊತ್ತಕ್ಕೆ ಸೆಕ್ಷನ್ 80ಸಿ ಅಡಿ ವಿನಾಯಿತಿ ಸಿಗುತ್ತದೆ.
ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ಕಡಿಮೆ ಇವೆ. ಆದರೆ ಹಳೆಯ ತೆರಿಗೆ ಪದ್ಧತಿಯಲ್ಲಿರುವ ವಿನಾಯಿತಿ, ರಿಯಾಯಿತಿಗಳು ಇದರಲ್ಲಿ ಇಲ್ಲ. ಹೊಸ ತೆರಿಗೆ ಪದ್ಧತಿಗೆ 2023ರ ಬಜೆಟ್ ಅನೇಕ ಬದಲಾವಣೆ ತಂದಿದೆ. ತೆರಿಗೆ ವಿನಾಯಿತಿ ಮಿತಿಯನ್ನು ಎರಡೂವರೆ ಲಕ್ಷ ರೂಪಾಯಿಯಿಂದ ಮೂರು ಲಕ್ಷ ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಟ್ಯಾಕ್ಸ್ ಸ್ಲ್ಯಾಬ್ ಗಳ ಸಂಖ್ಯೆಯನ್ನು 6 ರಿಂದ 5 ಕ್ಕೆ ಇಳಿಕೆ ಮಾಡಲಾಗಿದೆ. ಸ್ಯಾಲರೀಡ್ ಇಂಡಿವಿಜುಯಲ್ಸ್ ಗೆ 50 ಸಾವಿರ ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತಿದೆ. ಹೆಚ್ಚಿನ ಆದಾಯ ಗಳಿಸುವವರಿಗೆ ಸರ್ ರ್ಚಾರ್ಜ್ ಇಳಿಕೆ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಏಳು ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಇದಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದರೆ ಏಳೂವರೆ ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆ ಪರಿಮಿತಿಯಿಂದ ಹೊರಗಿರತ್ತದೆ.
ಇನ್ಕಮ್ ಟ್ಯಾಕ್ಸ್ ಕ್ಯಾಲ್ಕುಲೇಟರ್ ಮೂಲಕ ತೆರಿಗೆ ಉಳಿತಾಯವನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೋಬಹುದು. ಉದಾಹರಣೆಗೆ ನಿಮ್ಮ ಒಟ್ಟು ವೇತನ ಅಥವಾ ಗ್ರಾಸ್ ಸ್ಯಾಲರಿ ಹತ್ತು ಲಕ್ಷ ರೂಪಾಯಿ ಆದರೆ ಎರಡೂ ತೆರಿಗೆ ಪದ್ಧತಿಯಲ್ಲಿ ನಿಮಗೆ 50 ಸಾವಿರ ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತದೆ. ಇತರ ಯಾವುದೇ ವಿನಾಯಿತಿ ಅಥವಾ ಉಳಿತಾಯಗಳಿಲ್ಲದೇ ಇದ್ದರೆ ಹಳೆಯ ತೆರಿಗೆ ಪದ್ಧತಿಯಡಿ 1 ಲಕ್ಷ 6 ಸಾವಿರದ 600 ರೂಪಾಯಿ ತೆರಿಗೆ ಪಾವತಿಸಬೇಕಾಗತ್ತದೆ. ಆದರೆ ಹೊಸ ತೆರಿಗೆಯಡಿ 54 ಸಾವಿರದ 600 ರೂಪಾಯಿ ತೆರಿಗೆ ಪಾವತಿಸಬೇಕಾಗತ್ತದೆ. ಹೀಗೆ, ನೀವು ಹೊಸ ತೆರಿಗೆ ಪದ್ಧತಿಯಲ್ಲಿ 52 ಸಾವಿರ ರೂಪಾಯಿ ಉಳಿತಾಯ ಮಾಡಬಹುದಾಗಿದೆ.
ಹಳೆಯ ತೆರಿಗೆ ವ್ಯವಸ್ಥೆಯಡಿ, ನೀವು 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ಉಳಿತಾಯ ಮಾಡಿದರೆ 80ಡಿ ಅಡಿ 25 ಸಾವಿರ, ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ ಎನ್ ಪಿ ಎಸ್ ನಲ್ಲಿ 50 ಸಾವಿರ ರೂಪಾಯಿ ಹೂಡಿಕೆ ಮಾಡಿ, ಗೃಹ ಸಾಲದ ಬಡ್ಡಿ ಮೇಲೆ ಸೆಕ್ಷನ್ 24(ಬಿ) ಅಡಿಯಲ್ಲಿ 2 ಲಕ್ಷ ರೂಪಾಯಿ ವಿನಾಯಿತಿ ದೊರೆತರೆ, ಹಳೆಯ ತೆರಿಗೆ ಪದ್ಧತಿಯಡಿ ನಿಮ್ಮ ತೆರಿಗೆ ಬಾಧ್ಯತೆ 18 ಸಾವಿರದ 200 ರೂಪಾಯಿ ಆಗತ್ತದೆ. ಇಂತಹ ಸನ್ನಿವೇಶದಲ್ಲಿ ನೀವು ಒಲ್ಡ್ ಟ್ಯಾಕ್ಸ್ ರಿಜೈಮ್ ಆಯ್ಕೆ ಮಾಡಿಕೊಂಡು 36 ಸಾವಿರದ 400 ರೂಪಾಯಿ ತೆರಿಗೆ ಉಳಿಸಬಹುದು.
ಎಲ್ಲಾ ಎಕ್ಸಂಪ್ಷನ್ ಗಳನ್ನ ಗರಿಷ್ಠ ಮಿತಿಯವರೆಗೆ ಬಳಕೆ ಮಾಡುವುದಕ್ಕೆ ಸಾಧ್ಯವಾದರೆ ಅಂದರೆ ಹೊಸ ತೆರಿಗೆ ರಿಜೈಮ್ ನ ಮಿತಿಯನ್ನು ಮೀರಿ ವಿನಾಯಿತಿ ಪಡೆಯೋಕೆ ಸಾಧ್ಯ ಆದರೆ ಹಳೆಯ ರಿಜೈಮ್ ನಿಂದ ಲಾಭ ಪಡೆಯಬಹುದು ಎನ್ನುವುದು ಈ ಲೆಕ್ಕಾಚಾರದಿಂದ ಗೊತ್ತಾಗುತ್ತದೆ. ಉದಾಹರಣೆಗೆ, ತೆರಿಗೆಪಾವತಿದಾರರು ತಮ್ಮ ಆದಾಯದ ಬಹುಪಾಲನ್ನು ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಓಲ್ಡ್ ಟ್ಯಾಕ್ಸ್ ರಿಜೈಮ್ ಹೆಚ್ಚು ಲಾಭದಾಯಕ.
ಆದಾಗ್ಯೂ, ಯಾರಿಗೆಲ್ಲಾ ಹೂಡಿಕೆಗೆ ಅಂತಾ ಹಣ ಮೀಸಲಿಡೋಕೆ ಸಾಧ್ಯ ಆಗೋದಿಲ್ವೋ ಅಥವಾ ತೆರಿಗೆ ಕಡಿಮೆ ಆಗಬೇಕು ಅಂತಾ ಉಳಿತಾಯ ಮಾಡುವುದಕ್ಕೆ ಯಾರು ಬಯಸುವುದಿಲ್ಲವೋ ಅಂತಹವರಿಗೆ ನ್ಯೂ ಟ್ಯಾಕ್ಸ್ ರಿಜೈಮ್ ಲಾಭದಾಯಕ. ಯಾವುದೇ ರಿಜೈಮ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಮೊದಲು, ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿರುವ ಇನ್ಕಮ್ ಟ್ಯಾಕ್ಸ್ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕಾಚಾರ ಮಾಡಿ, ಯಾವುದು ಸೂಕ್ತ ಎಂದು ತಿಳಿದುಕೊಳ್ಳುವುದು ಉತ್ತಮ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ