` what you can do to get your employer to deposit pf | ಕಂಪನಿ ನಿಮ್ಮ PF ಹಣ ಕಟ್ಟುತ್ತಿಲ್ಲವೇ? ಪರಿಹಾರ ಏನು? | Money9 Kannada

ಕಂಪನಿ ನಿಮ್ಮ PF ಹಣ ಕಟ್ಟುತ್ತಿಲ್ಲವೇ? ಪರಿಹಾರ ಏನು?

ನಿಮ್ಮ ಸಂಬಳದಿಂದ ಪಿಎಫ್ ಹಣವನ್ನು ಕಟ್ ಮಾಡಲಾಗಿದ್ದರೂ, ಪಿಎಫ್ ಅಕೌಂಟ್‌ಗೆ ಡೆಪಾಸಿಟ್ ಮಾಡಿಲ್ಲವೇ? ಹಾಗಾದರೆ, ನೀವು ಏನು ಮಾಡಬೇಕು? ಈ ಸಮಸ್ಯೆಗೆ ಪರಿಹಾರ ಹುಡುಕೋದು ಹೇಗೆ?

ಗೆಳೆಯ ಮೋಹಿತ್‌ ಜೊತೆ ಮಾತನಾಡುತ್ತಿದ್ದ ರೋಹನ್, ಇತ್ತೀಚೆಗೆ ಪಿಎಫ್ ಡಿಡಕ್ಷನ್‌ ಬಗ್ಗೆ ಯಾವುದೇ ಮೆಸೇಜ್ ಬಂದಿಲ್ಲ ಎನ್ನುತ್ತಾರೆ. ಮೋಹಿತ್‌ಗೆ ಆಶ್ಚರ್ಯ ಆಗುತ್ತದೆ. ಏಕೆಂದರೆ, ಎಲ್ಲ ನೌಕರರಿಗೆ ಇಪಿಎಫ್ಒ ಮೆಸೇಜ್ ಕಳುಹಿಸುತ್ತದೆ. ಸಂಬಳದಲ್ಲಿ ಪಿಎಫ್ ಕಟ್ ಆಗಿ, ಅದು ಕ್ರೆಡಿಟ್ ಆದಾಗ, ಉದ್ಯೋಗಿಗೆ ಇಪಿಎಫ್‌ಒ ತಿಳಿಸುತ್ತದೆ ಅಂತ ರೋಹನ್ ಇದಕ್ಕೆ ಉತ್ತರಿಸುತ್ತಾರೆ. ಆತಂಕಕ್ಕೊಳಗಾದ ಇಬ್ಬರು ಸ್ನೇಹಿತರು ಇಪಿಎಫ್‌ಒ ಸೈಟ್‌ಗೆ ಲಾಗ್ ಇನ್ ಮಾಡಿದ್ದಾರೆ. ರೋಹನ್ ಕಂಪನಿ ಕಳೆದ 4 ತಿಂಗಳಿಂದಲೂ ಅವರ ಇಪಿಎಫ್‌ಒ ಖಾತೆಗೆ ಹಣ ಹಾಕಿಲ್ಲ. ಅದೇ ವೇಳೆ, ಮೋಹಿತ್ ಅವರ ಕಂಪನಿ ಕೂಡಾ ಕಳೆದ 6 ತಿಂಗಳಿಂದ ಹಣ ಹಾಕಿಲ್ಲ.

ಇದು ಅನೇಕ ನೌಕರರು ಎದುರಿಸುತ್ತಿರುವ ಸಮಸ್ಯೆ. ಕಂಪನಿ ತನ್ನ ನೌಕರರ ಸಂಬಳದಿಂದ PF ಹಣ ಕಟ್ ಮಾಡಿಕೊಳ್ಳುತ್ತದೆ. ಆದರೆ ಅದನ್ನು ಅವರ PF ಖಾತೆಗೆ ಡೆಪಾಸಿಟ್ ಮಾಡೋದಿಲ್ಲ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಸ್ಟಾರ್ಟ್‌ಅಪ್‌ಗಳಲ್ಲಿ ಇಂತಹ ಹಲವು ಪ್ರಕರಣ ಬೆಳಕಿಗೆ ಬಂದಿದೆ. ಇದು ಉದ್ಯೋಗಿಯ ಭವಿಷ್ಯದ ಜೊತೆಗೆ ಆಟವಾಡುವಂಥ ಕೆಲಸ. ಉದ್ಯೋಗಿಯ ಪಿಎಫ್ ಫಂಡ್ ಅನ್ನೋದು ಅವರ ಭವಿಷ್ಯದ ಸಂಪತ್ತಿನ ರೂಪದಲ್ಲಿ ಕೆಲಸ ಮಾಡುತ್ತವೆ.

ಆನ್‌ರೋಲ್‌ನಲ್ಲಿ 20 ಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಪ್ರತಿ ಕಂಪನಿಯು ಇಪಿಎಫ್‌ಒ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ರಿಜಿಸ್ಟರ್ ಮಾಡಿಕೊಂಡ ಕಂಪನಿಗಳು ಉದ್ಯೋಗಿಯ ಮೂಲ ವೇತನದ 12% ಹಣವನ್ನು ಅವರ PF ಖಾತೆಗೆ ಹಾಕಬೇಕು. ಕಂಪನಿ ಕೂಡಾ ವಿವಿಧ ವಿಭಾಗದ ಅಡಿಯಲ್ಲಿ ಅಷ್ಟೇ ಹಣವನ್ನು ಕೊಡುತ್ತದೆ. ಪಿಎಫ್‌ಗೆ ಎಂದು ಕಟ್ ಮಾಡಿದ ಹಣವನ್ನು ಉದ್ಯೋಗಿಯ ಇಪಿಎಫ್‌ಒ ಖಾತೆಗೆ ಡೆಬಿಟ್ ಮಾಡುವುದು ಕಂಪನಿಯ ಜವಾಬ್ದಾರಿ.

ಸಂಬಳ ಕ್ರೆಡಿಟ್ ಆದ ಮುಂದಿನ ತಿಂಗಳ 15 ನೇ ತಾರೀಖಿನೊಳಗೆ ಉದ್ಯೋಗಿಯ EPFOಗೆ ಎಂಪ್ಲಾಯರ್ ಹಣ ಹಾಕಬೇಕು. ಅಂದರೆ ಸೆಪ್ಟೆಂಬರ್ ತಿಂಗಳ ಸಂಬಳವನ್ನು ಅಕ್ಟೋಬರ್ 1 ರಂದು ಜಮಾ ಮಾಡಿದರೆ, PF ಗೆ ಎಂದು ಕಟ್ ಮಾಡಿದ ಹಣವನ್ನು ಅಕ್ಟೋಬರ್ 15 ರೊಳಗೆ ಡೆಪಾಸಿಟ್ ಮಾಡಬೇಕು.

ಎಂಪ್ಲಾಯರ್‌ಗಳ EPF ಕಾಂಟ್ರಿಬ್ಯೂಶನ್‌ನಲ್ಲಿ ಯಾವುದೇ ದೋಷ ಅಥವಾ ವಿಳಂಬ ಕಂಡುಬಂದಲ್ಲಿ ಉದ್ಯೋಗಿ ಭವಿಷ್ಯ ನಿಧಿ ಕಾಯ್ದೆಯ ಸೆಕ್ಷನ್ 14B ಅಡಿಯಲ್ಲಿ ಎಂಪ್ಲಾಯರ್ ದಂಡ ಕಟ್ಟಬೇಕಾಗುತ್ತದೆ ಎಂದು ಫೆಬ್ರವರಿ 2022 ರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪಿಎಫ್ ಕಟ್ ಮಾಡಿದ ನಂತರ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ. ರೋಹನ್ ಪ್ರಕರಣದಲ್ಲಿ, ಸಂಬಳದಿಂದ ಪಿಎಫ್ ಹಣವನ್ನು ಕಂಪನಿ ಕಟ್ ಮಾಡಿತ್ತು. ಆದರೆ ಅದನ್ನು ಇಪಿಎಫ್‌ಒಗೆ ಡೆಪಾಸಿಟ್ ಮಾಡಿರಲಿಲ್ಲ. ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ, ಎಡ್‌ಟೆಕ್ ಕಂಪನಿ ಬೈಜೂಸ್ ಬಗ್ಗೆಯೂ ಇದೇ ರೀತಿಯ ಸುದ್ದಿ ಬಂದಿತ್ತು. ಆದರೆ, ಕಂಪನಿ ಕೊನೆಗೆ ಪೇಮೆಂಟ್ ಮಾಡಿದೆ.

ಹೀಗಾಗಿ, ನಿಮ್ಮ ಪಿಎಫ್ ಹಣವನ್ನು ನಿಜವಾಗಿಯೂ ನಿಮ್ಮ ಇಪಿಎಫ್ ಖಾತೆಗೆ ಠೇವಣಿ ಮಾಡಲಾಗುತ್ತಿದೆ ಅಂತ ಖಚಿತಪಡಿಸಿಕೊಳ್ಳುವುದು ಅಗತ್ಯ. ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ ಮತ್ತು ಪ್ರತಿ ತಿಂಗಳು ಹಣವನ್ನು ಡೆಪಾಸಿಟ್ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಇದನ್ನು ತಿಳಿದುಕೊಳ್ಳುವುದಕ್ಕೆ ಹಲವಾರು ಮಾರ್ಗಗಳಿವೆ. EPFO ಪೋರ್ಟಲ್‌ಗೆ ಹೋಗಿ ನೋಡುವುದೂ ಒಂದು ಮಾರ್ಗ. ಇನ್ನೊಂದು ಮಾರ್ಗವೆಂದರೆ UMANG ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಸೈನ್ ಅಪ್ ಮಾಡುವುದು. ಇದರಲ್ಲಿ ನಿಮ್ಮ ಪಾಸ್‌ಬುಕ್ ಡೌನ್‌ಲೋಡ್ ಮಾಡಿ ನೋಡಿಕೊಳ್ಳಬಹುದು. ನಿಮ್ಮ ರಿಜಿಸ್ಟರ್ಡ್‌ ಮೊಬೈಲ್ ಸಂಖ್ಯೆಯಿಂದ 7738299899 ಗೆ SMS ಕಳುಹಿಸುವುದು ಮೂರನೇ ಮತ್ತು ಸುಲಭದ ಮಾರ್ಗ. EPFOHO (ಸ್ಪೇಸ್) UAN ಎಂದು ಟೈಪ್ ಮಾಡಿ,ಕಳುಹಿಸಿ. ಅಷ್ಟೇ ಅಲ್ಲ, ನಿಮ್ಮ ರಿಜಿಸ್ಟರ್ಡ್‌ ಮೊಬೈಲ್ ಸಂಖ್ಯೆಯಿಂದ 9966044425 ಗೆ ಕರೆ ಮಾಡಬಹುದು.

ಈಗ, ನಿಮ್ಮ ಸಂಬಳದಿಂದ ಪಿಎಫ್ ಹಣವನ್ನು ಕಟ್ ಮಾಡಲಾಗಿದ್ದರೂ, ಪಿಎಫ್ ಅಕೌಂಟ್‌ಗೆ ಡೆಪಾಸಿಟ್ ಮಾಡಿಲ್ಲವೇ? ಹಾಗಾದರೆ, ನೀವು ಏನು ಮಾಡಬೇಕು? ಈ ಸಮಸ್ಯೆಗೆ ಪರಿಹಾರ ಹುಡುಕೋದು ಹೇಗೆ? ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದೀರಿ, ಆದರೆ ಕಂಪನಿ ನಿಮ್ಮ ಮಾತನ್ನು ಕೇಳುತ್ತಿಲ್ಲ. ಹಾಗಾದರೆ, ನಿಮ್ಮ ಬಳಿ ಇರುವ ಆಯ್ಕೆ ಯಾವುದು? ಇವು ಅತಿ ಮುಖ್ಯ ಪ್ರಶ್ನೆಗಳು. ಈ ಸಮಸ್ಯೆ ಪರಿಹರಿಸಲು ಕೆಲವು ಆಯ್ಕೆಗಳು ಇಲ್ಲಿವೆ.

ನೀವು ಬಯಸಿದರೆ, ನಿಮ್ಮ ಏರಿಯಾದಲ್ಲಿರುವ ಪ್ರಾದೇಶಿಕ ಪಿಎಫ್‌ ಕಮೀಷನರ್‌ಗೆ ದೂರು ಸಲ್ಲಿಸಬಹುದು. ನೀವು ಕಂಪನಿ ಮತ್ತು ಅದರ ನಿರ್ದೇಶಕರಿಗೆ ಲೀಗಲ್ ನೋಟಿಸ್‌ ಸಹ ಕಳುಹಿಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಳೆಯ PF ಕಾಂಟ್ರಿಬ್ಯೂಶನ್‌ಗಳನ್ನು ಡೆಪಾಸಿಟ್ ಮಾಡುವಂತೆ ನಿಮ್ಮ ಕಂಪನಿಯನ್ನು ನೀವು ಒತ್ತಾಯಿಸುವ ಹಲವು ಆಯ್ಕೆಗಳಿವೆ.

ಅಂತಿಮವಾಗಿ, ನೀವು ಎಚ್ಚರಿಕೆಯಿಂದಿರಬೇಕು. PF ಹಣ ಕಟ್ ಆಗುತ್ತಿದೆ ಎಂದಾದರೆ, ನಿಮ್ಮ ಪಾಸ್‌ಬುಕ್ ಬ್ಯಾಲೆನ್ಸ್ ಎಷ್ಟಿದೆ ಅಂತ ತಿಂಗಳಿಗೊಮ್ಮೆ EPFO ನಿಮಗೆ ಮೆಸೇಜ್ ಕಳಿಸುತ್ತದೆ. ಇದರಲ್ಲಿ ಪ್ರತಿ ತಿಂಗಳು ನಿಮಗೆ ಎಷ್ಟು ಕ್ರೆಡಿಟ್ ಮಾಡಲಾಗಿದೆ ಎಂಬುದನ್ನೂ ತೋರಿಸುತ್ತದೆ.
ಒಂದು ವೇಳೆ, ನಿಮಗೆ ಈ ಮೆಸೇಜ್‌ಗಳು ಬರದಿದ್ದರೆ, ಅಲರ್ಟ್ ಆಗಿ. ಪಿಎಫ್ ನಿಮ್ಮ ಭವಿಷ್ಯಕ್ಕೆ ಅತ್ಯಗತ್ಯವಾದ ನಿಧಿ. ನಿಮ್ಮ ಸ್ಯಾಲರಿ ಸ್ಲಿಪ್‌ನ ಪ್ರತಿಯೊಂದು ಐಟಂ ಅನ್ನೂ ನೋಡಿಕೊಳ್ಳಿ. ಹಣವು ಸರಿಯಾದ ಸ್ಥಳಕ್ಕೆ ಹೋಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಕಷ್ಟಪಟ್ಟು ಸಂಪಾದಿಸಿದ ಹಣದ ಸಂಪೂರ್ಣ ವಿವರ ತಿಳಿದುಕೊಳ್ಳುವ ಹಕ್ಕು ನಿಮಗೆ ಇದೆ. ಅಲರ್ಟ್ ಆಗಿರಿ. ಕಂಪನಿ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ, ನಿಮ್ಮ ಸರಿಯಾದ ಹಣವನ್ನು ಕ್ಲೈಮ್ ಮಾಡಲು ಸರಿಯಾದ ರೂಪದಲ್ಲಿ ದೂರು ನೀಡಿ.

Published: April 15, 2024, 15:08 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ