` what exactly is a cyber slavery | ಸೈಬರ್ ಸ್ಲೇವರಿ ಎಂದರೇನು? ಭಾರತೀಯರೆ ಬಲಿಯಾಗುತ್ತಿರುವುದೇಕೆ? | Money9 Kannada

ಸೈಬರ್ ಸ್ಲೇವರಿ ಎಂದರೇನು? ಭಾರತೀಯರೆ ಬಲಿಯಾಗುತ್ತಿರುವುದೇಕೆ?

ಬಲವಂತವಾಗಿ ಯಾರನ್ನಾದರೂ ತಮ್ಮ ವಶದಲ್ಲಿ ಇರುವಂತೆ ನೋಡಿಕೊಂಡು ಅವರ ಬಳಿ ಸೈಬರ್ ವಂಚನೆ ಮಾಡಲು ಪ್ರೇರೇಪಿಸುವುದೇ ಸೈಬರ್ ಸ್ಲೇವರಿ. ಸೈಬರ್ ಗುಲಾಮಗಿರಿಯ ಹಲವಾರು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಲೇ ಇವೆ.

ಬೆಂಗಳೂರಿನ ನಿವಾಸಿ ಮೋಹನ್ ಅವರಿಗೆ ಒಂದು ದಿನ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದವರು ಪೊಲೀಸ್ ಠಾಣೆಯಿಂದ ಕರೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಡ್ರಗ್ಸ್ ಪ್ರಕರಣದಲ್ಲಿ ಮೋಹನ್ ಅವರ ಪುತ್ರಿ ಹಾಗೂ ಆಕೆಯ ಸ್ನೇಹಿತರ ಹೆಸರು ಕೇಳಿಬಂದಿದೆ ಎಂದು ಭಯಬೀಳಿಸುತ್ತಾರೆ. ಇದನ್ನು ಕೇಳಿ ಮೋಹನ್ ಆತಂಕಗೊಂಡರು. ಈ ವಿಷಯ ಬಹಿರಂಗ ಆಗಬಾರದು ಎಂದರೆ ಹಣ ನೀಡಬೇಕು ಅಂತ ಬೇಡಿಕೆಯಿಟ್ಟರು. ಹಣ ನೀಡದಿದ್ದರೆ ನಿಮ್ಮ ಮಗಳಿಗೆ ತೊಂದರೆಯಾಗಬಹುದು ಅಂತಾ ಎಚ್ಚರಿಕೆ ಸಹ ನೀಡಿದರು. ಭಯದಿಂದ ಮೋಹನ್ ತಕ್ಷಣವೇ 30,000 ರೂ. ಅವರು ಹೇಳಿದಂತೆ ಟ್ರಾನ್ಸ್ ಫರ್ ಮಾಡಿದರು. ಇಂಥ ವಂಚನೆ ಪ್ರಕರಣಗಳೂ ಈಗ ವೇಗವಾಗಿ ಹೆಚ್ಚುತ್ತಿವೆ. ಸೈಬರ್ ವಂಚನೆಯ ಜೊತೆಗೆ ಸೈಬರ್ ಸ್ಲೇವರಿ ಎಂಬ ಹೊಸ ವಂಚನೆ ರೂಪ ತಲೆ ಎತ್ತಿದೆ. ಹಾಗಿದ್ದರೆ ಈ ಸೈಬರ್ ಸ್ಲೇವರಿ ಅಥವಾ ಗುಲಾಮಗಿರಿ ಅಂದ್ರೆ ಏನು? ಯಾವ ರೀತಿ ವಂಚಕರು ಬಲೆ ಬೀಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ,.

ಬಲವಂತವಾಗಿ ಯಾರನ್ನಾದರೂ ತಮ್ಮ ವಶದಲ್ಲಿ ಇರುವಂತೆ ನೋಡಿಕೊಂಡು ಅವರ ಬಳಿ ಸೈಬರ್ ವಂಚನೆ ಮಾಡಲು ಪ್ರೇರೇಪಿಸುವುದೇ ಸೈಬರ್ ಸ್ಲೇವರಿ. ಸೈಬರ್ ಗುಲಾಮಗಿರಿಯ ಹಲವಾರು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಲೇ ಇವೆ. ಪೂರ್ವ ಏಷ್ಯಾದ ದೇಶಗಳಲ್ಲಿಈ ರೀತಿಯ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಕಾಂಬೋಡಿಯಾ ಇಂಥ ಒಂದು ವಂಚನೆಯ ಕೇಂದ್ರವಾಗಿದೆ. 5,000 ಕ್ಕೂ ಹೆಚ್ಚು ಭಾರತೀಯರನ್ನು ಕಾಂಬೋಡಿಯಾದಲ್ಲಿ ಸೆರೆಯಲ್ಲಿ ಇರಿಸಿಕೊಂಡು ಅವರ ಬಳಿಯೇ ಭಾರತೀಯರನ್ನು ಸೈಬರ್ ಖೆಡ್ಡಾಕ್ಕೆ ಕೆಡವಲು ಒತ್ತಾಯಿಸಲಾಗುತ್ತಿದೆ ಅನ್ನೋ ವರದಿಗಳು ಬಂದಿವೆ. ಈ ವ್ಯಕ್ತಿಗಳನ್ನು ಬಳಸಿಕೊಂಡು ಕಳೆದ ಆರು ತಿಂಗಳಲ್ಲಿ ಭಾರತೀಯರಿಂದ ಕನಿಷ್ಠ ಅಂದ್ರೂ 600 ಕೋಟಿ ರೂಪಾಯಿ ವಂಚಿಸಲಾಗಿದೆ ಎನ್ನುವ ಅಂದಾಜಿದೆ.

ಉದ್ಯೋಗ ಅರಸಿ ವಿದೇಶಕ್ಕೆ ತೆರಳಿರುವ ಭಾರತೀಯರು ಈ ಸೈಬರ್ ಸ್ಲೇವರಿಗೆ ಸಿಕ್ಕಿಹಾಕಿಕೊಂಡಿರುತ್ತಾರೆ. ಡೇಟಾ ಎಂಟ್ರಿಯಂತಹ ಕೆಲಸ ಕೊಡಿಸುತ್ತೇವೆ ಅಂತಾ ನಂಬಿಸುವ ಏಜೆಂಟರು ಇವರನ್ನು ಮರುಳು ಮಾಡಿರುತ್ತಾರೆ. ಸಮುದ್ರದಾಚೆ ಕರೆದುಕೊಂಡು ಹೋಗುವ ಅವರು ಇಂಥವರ ಬಳಿ ಸೈಬರ್ ಅಪರಾಧ ಎಸಗುವಂತೆ ಮಾಡಿಸುತ್ತಾರೆ. ಭಾರತೀಯರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡಲು ಹೇಳಲಾಗುತ್ತದೆ. ಮೋಹನ್ ಸ್ವೀಕರಿಸಿದ ಕರೆ ಇಂಥ ಸೈಬರ್ ಸ್ಲೇವರಿಗೆ ಗುರಿಯಾದವರಿಂದ ಬಂದಿರುವುದೇ ಆಗಿರಬಹುದು. ಭಾರತದಲ್ಲಿ ನಡೆಯುತ್ತಿರುವ ಸೈಬರ್ ವಂಚನೆಯ ಪ್ರಕರಣಗಳಿಗೆ ಪೂರ್ವ ಏಷ್ಯಾ ರಾಷ್ಟ್ರಗಳ ಲಿಂಕ್ ಇದೆ ಎನ್ನುವ ರಿಪೋರ್ಟ್ ಗಳು ಮೇಲಿಂದ ಮೇಲೆ ಬರುತ್ತಲೇ ಇವೆ.

ಈ ಬಗೆಯ ಸೈಬರ್ ಸ್ಲೇವರಿಗೆ ಗುರಿಯಾಗಿದ್ದ ಅನೇಕರನ್ನು ಸರ್ಕಾರಗಳು ರಕ್ಷಣೆ ಮಾಡಿವೆ. ದೊಡ್ಡ ಸಂಖ್ಯೆಯ ಜನರು ಇನ್ನೂ ವಿದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂಥ ಸೈಬರ್ ಗ್ಯಾಂಗ್‌ನ ಹಿಡಿತದಿಂದ ಪಾರಾಗಿ ಬಂದವರೊಬ್ಬರು ತಮ್ಮ ಕರಾಳ ಕತೆಯನ್ನು ಹೇಳುತ್ತಾರೆ. ಮಹಿಳೆಯರ ಪೋಟೋ ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಲು ಹೇಳಲಾಗುತ್ತದೆ. ಇದಾದ ಮೇಲೆ ಕೆಲವರನ್ನು ಟಾರ್ಗೆಟ್ ಮಾಡಿ ಕರೆ ಮಾಡಲು ಹೇಳಲಾಗುತ್ತದೆ. ಒಂದು ವೇಳೆ ಈ ಕೆಲಸ ಮಾಡಲ್ಲ ಅಂತ ಹೇಳಿದರೆ ಆತನಿಗೆ ಊಟ ಸಿಗೋದಿಲ್ಲ. ದೈಹಿಕ ಹಿಂಸೆಗೆಗೂ ಗುರಿಯಾಗಬೇಕಾಗುತ್ತದೆ. ಇಷ್ಟೇ ಅಲ್ಲ ನೀಚರು ತಮ್ಮ ವಶದಲ್ಲಿರುವವರಿಗೆ ಎಲೆಕ್ಟ್ರಿಕ್ ಶಾಕ್ ನೀಡಲು ಹೇಸುವುದಿಲ್ಲ.

ಸೈಬರ್ ಸ್ಲೇವ್ ಆಗಿರುವವರ ಟಾರ್ಗೆಟ್ ಗೆ ನೀವು ಬಲಿಯಾಗಬಾರದು ಅಂತಾದರೆ ಎಚ್ಚರಿಕೆ ಮತ್ತು ಜಾಗರೂಕತೆಯೊಂದೆ ಪರಿಹಾರ. ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವ ದುಸ್ಸಾಹಸ ಮಾಡಬಾರದು. ಅಪರಿಚಿತ ಕರೆ ಬಂದರೆ ನಂಬಲು ಹೋಗಬಾರದು. ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆ ಇಟ್ಟುಕೊಂಡಿರಬೇಕು. ಕರೆ ಮಾಡಿದ್ದವರು ಎಮರ್ಜನ್ಸಿ ಅಂತಾ ನಿಮ್ಮ ಬೆನ್ನು ಬಿದ್ದರೆ ತಕ್ಷಣ ಎಚ್ಚರಿಕೆ ವಹಿಸಿ. ಪೊಲೀಸರು ಅಂತಾ ಹೇಳಿಕೊಂಡು ಕರೆ ಮಾಡಿದರೆ ಅವರಿಗೆ ಪ್ರಶ್ನೆ ಕೇಳಿ, ಅವರು ಯಾವ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿದ್ದಾರೆ ಅವರ ಹೆಸರು ಮತ್ತು ಹುದ್ದೆ ಏನು ಎಂದು ವಿಚಾರಿಸಿ. ಅವರು ನಿಮ್ಮ ಬಳಿ ಹೇಳಿರುವ ಮಾಹಿತಿಗಳ ಕ್ರಾಸ್ ಚೆಕ್ ಮಾಡಿ. ಯಾವುದೇ ಕಾರಣಕ್ಕೂ ಭಯ ಬೀಳಬೇಡಿ.. ನಿಮ್ಮ ಭಯ-ಆತಂಕವೇ ಅವರ ಬಂಡವಾಳ. ಜಾಗರೂಕರಾಗಿರಿದ್ದರೆ ನೀವು ವಂಚಕರ ಕೈಯಿಂದ ಮುಕ್ತರಾಗಿರುತ್ತೀರಿ

Published: April 22, 2024, 13:26 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ