ನವದೆಹಲಿ (ಏ.18): ಇಪಿಎಫ್ ಅಂದರೆ ಉದ್ಯೋಗಿಗಳ ಭವಿಷ್ಯನಿಧಿ ವಿಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯಿಂದ 1 ಲಕ್ಷ ರೂ. ತನಕ ಹಣ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅವಕಾಶ ನೀಡಿದೆ. ಈ ಹಿಂದೆ ವೈದ್ಯಕೀಯ ವೆಚ್ಚಕ್ಕೆ 50 ಸಾವಿರ ರೂ. ಮಾತ್ರ ವಿತ್ ಡ್ರಾ ಮಾಡಲು ಅವಕಾಶವಿತ್ತು. ಏಪ್ರಿಲ್ 16ರಂದು ಇಪಿಎಫ್ಒ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಮಿತಿಯನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು ಉದ್ಯೋಗಿಗಳಿಗೆ ದೊಡ್ಡ ರಿಲೀಫ್ ಸಿಕ್ಕಿದೆ ಅಂತಾನೇ ಹೇಳಬಹುದು.
ಇಪಿಎಫ್ಒ ಸದಸ್ಯರು ಈಗ ತಮ್ಮ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರ ಚಿಕಿತ್ಸೆಗೆ ಅಂತ ಪಿಎಫ್ ಖಾತೆಯಿಂದ 1 ಲಕ್ಷ ರೂ. ಹಣ ತೆಗೆಯಬಹುದು. ಇಪಿಎಫ್ಒ ಪ್ರಕಾರ, ಒಬ್ಬ ಸದಸ್ಯರು ಅಥವಾ ಅವರ ಅವಲಂಬಿತರು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿಲ್ಲಿದ್ದರೆ, ಆಸ್ಪತ್ರೆಯಲ್ಲಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅಥವಾ ಟಿಬಿ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಅಥವಾ ಹೃದ್ರೋಗದಿಂದ ಬಳಲುತ್ತಿದ್ದರೆ, ಅವರು ಮುಂಗಡವಾಗಿ ಹಣ ಪಡೆಯಲು ಅರ್ಜಿ ಸಲ್ಲಿಸಬಹುದು. ಆದರೆ, ಉದ್ಯೋಗಿ ಅಥವಾ ಅವನ ಕುಟುಂಬದ ಸದಸ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕಿರುತ್ತದೆ. ನೀವು ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆ, ತಪಾಸಣೆ ಮಾಡಿದ ನಂತರವೇ ನಿಮಗೆ ಕ್ಲೈಮ್ ಸಿಗುತ್ತದೆ. ಅರ್ಜಿ ನಮೂನೆ 31ರ ಮೂಲಕ ಅನೇಕ ಉದ್ದೇಶಗಳಿಗೆ ಇಪಿಎಫ್ ಭಾಗಶಃ ವಿತ್ ಡ್ರಾಗೆ ಅವಕಾಶ ನೀಡಿದೆ. ಮದುವೆಯಿಂದ ಹಿಡಿದು ಸಾಲಗಳ ಮರುಪಾವತಿ ಹಾಗೂ ಫ್ಲ್ಯಾಟ್ ಖರೀದಿಯಿಂದ ಹಿಡಿದು ಮನೆ ನಿರ್ಮಾಣದ ತನಕ ಅನೇಕ ಉದ್ದೇಶಗಳಿಗೆ ಇಪಿಎಫ್ ಹಣ ವಿತ್ ಡ್ರಾಗೆ ಅವಕಾಶವಿದೆ.
ಫಾರ್ಮ್ 31 ಎಂದರೇನು?
ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯಿಂದ ಹಣದ ಭಾಗಶಃ ವಿತ್ ಡ್ರಾಗೆ ಕ್ಲೇಮ್ ಮಾಡಲು ಇಪಿಎಫ್ ಫಾರ್ಮ್ 31 ಸಲ್ಲಿಕೆ ಮಾಡಬೇಕು. ಫಾರ್ಮ್ 31 ಮೂಲಕ ಮನೆ ಅಥವಾ ಪ್ಲ್ಯಾಟ್ ಖರೀದಿ ಅಥವಾ ನಿರ್ಮಾಣಕ್ಕೆ, ಪ್ಯಾರಾ 68BB ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಸಾಲದ ಮರುಪಾವತಿ, 68H ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಅಡ್ವಾನ್ಸ್ ಪಡೆಯಲು, 68J ಅಡಿಯಲ್ಲಿ ಅನಾರೋಗ್ಯಕ್ಕೆ ಮುಂಗಡ ಹಣ ಪಡೆಯಲು ಅವಕಾಶವಿದೆ. 68ಕೆ ಅಡಿಯಲ್ಲಿ ಮಕ್ಕಳ ಮದುವೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವೆಚ್ಚಕ್ಕೆ 68ಎನ್ ಪ್ಯಾರಾ ಅಡಿಯಲ್ಲಿ ಅಂಗವೈಕಲ್ಯಕ್ಕೆ ಸಂಬಂಧಿಸಿ. 68ಎನ್ಎನ್ ಅಡಿಯಲ್ಲಿ ನಿವೃತ್ತಿಗೆ ಒಂದು ವರ್ಷ ಇರುವಂತೆ ಹಣ ವಿತ್ಡ್ರಾ ಮಾಡಲು ಅವಕಾಶವಿದೆ.
Published: April 18, 2024, 11:47 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ