` is there an investment opportunity in shriram pistons and rings shares automobile sector | ಈ ಕಂಪನಿಯಿಲ್ಲದೆ ಆಟೋಮೊಬೈಲ್ ಸೆಕ್ಟರ್ ನಡೆಯೋದಿಲ್ಲ! | Money9 Kannada

ಈ ಕಂಪನಿಯಿಲ್ಲದೆ ಆಟೋಮೊಬೈಲ್ ಸೆಕ್ಟರ್ ನಡೆಯೋದಿಲ್ಲ!

ಕೋರ್ ಪ್ರಾಡಕ್ಟ್ ಅಂದ್ರೆ ಮೂಲ ಉತ್ಪನ್ನಗಳಲ್ಲಿ ತನ್ನ ಸದೃಢ ಅಸ್ತಿತ್ವ ಇನ್ನಷ್ಟು ಬಲಪಡಿಸುವುದಕ್ಕೆ ಕಂಪೆನಿ ಪ್ರಯತ್ನ ಮಾಡಿಕೊಂಡು ಬಂದಿದೆ. ಇದಕ್ಕಾಗಿ, ಕಂಪೆನಿಯು ಪರಿಸರ ಸ್ನೇಹಿ ಎಂಜಿನ್ ಆಯ್ಕೆಗಳಾದ ಸಿ ಎನ್ ಜಿ ಮತ್ತು ಹೈಡ್ರೋಜನ್ ನಂತಹ ಸಲ್ಯೂಷನ್ ಗಳನ್ನ ಅಭಿವೃದ್ಧಿ ಪಡಿಸೋಕೆ ಕಂಪೆನಿ ಗಮನಹರಿಸುತ್ತಿದೆ.

ಆಟೊಮೊಬೈಲ್ ಕ್ಷೇತ್ರದಲ್ಲಿ ಬಹುಬೇಡಿಕೆ ಹೊಂದಿರುವ ಪಿಸ್ಟನ್​ ರಿಂಗ್ಸ್ ಮತ್ತು ಎಂಜಿನ್​ನ ಬಿಡಿ ಭಾಗಗಳ ತಯಾರಿಕೆಯ ಮುಂಚೂಣಿಯಲ್ಲಿರುವ ಎಸ್​ಪಿಆರ್​ಎಲ್​ ಕಂಪೆನಿಯ ಸದ್ಯದ ಸ್ಥಿತಿ ಮತ್ತು ಬೆಳವಣಿಗೆ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ,

1972 ರಲ್ಲಿ ಸ್ಥಾಪಿತವಾದ ಶ್ರೀ ರಾಮ್ ಪಿಸ್ಟನ್ಸ್ ಅಂಡ್ ರಿಂಗ್ಸ್ ಅಥವಾ ಎಸ್​ಪಿಆರ್​ಎಲ್​ ಕಂಪೆನಿಯು ಆಟೊಮೊಬೈಲ್ ವಲಯದಲ್ಲಿ ಪಿಸ್ಟನ್, ಪಿಸ್ಟನ್ ರಿಂಗ್ಸ್ ಮತ್ತು ಎಂಜಿನ್ ಬಿಡಿ ಭಾಗಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಂಪೆನಿಗೆ ಐದು ದಶಕಗಳಿಗೂ ಹೆಚ್ಚು ಕಾಲದ ಅನುಭವ ಇದೆ. ಪಿಸ್ಟನ್ ಮತ್ತು ಸಂಬಂಧಿತ ಉತ್ಪನ್ನಗಳ ವಲಯದಲ್ಲಿ ಎಸ್ ಪಿ ಆರ್ ಎಲ್ ಮಹತ್ವದ ಕಂಪೆನಿಯಾಗಿದೆ. ಈ ಕಂಪೆನಿಯು ಅದರ ಮೂಲ ಉತ್ಪನ್ನ–ಕೋರ್ ಪ್ರಾಡಕ್ಟ್ ನ ಬಹುತೇಕ ಎಲ್ಲ ವಲಯಗಳಲ್ಲೂ ಶೇಕಡ 40 -50 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಭಾರತ ಮತ್ತು ವಿದೇಶಗಳಲ್ಲೂ ಎಸ್ ಪಿ ಆರ್ ಎಲ್ ಕಾರ್ಯಾಚರಣೆ ಇದೆ. ಭಾರತದಲ್ಲಿ, ಮಾರುಕಟ್ಟೆ ನಂತರದ ಆಪರೇಶನ್ ಗಾಗಿ 1 ಸಾವಿರದ 200 ಕ್ಕೂ ಹೆಚ್ಚು ಕೇಂದ್ರಗಳು ಅಥವಾ ಟಚ್ ಪಾಯಿಂಟ್ ಗಳನ್ನು ಕಂಪನಿ ಹೊಂದಿದೆ. ಇದಲ್ಲದೇ, ಕಂಪೆನಿಯು 45 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನಗಳನ್ನ ಪೂರೈಸಿಕೊಂಡು ಬಂದಿದೆ.

ದ್ವಿಚಕ್ರ ವಾಹನ, ಪ್ರಯಾಣಿಕ ವಾಹನ, ವಾಣಿಜ್ಯ ವಾಹನ, ರೈಲ್ವೆ ಮತ್ತು ರಕ್ಷಣಾ ವಲಯ ಹೀಗೆ ಅನೇಕೆಡೆಗಳಲ್ಲಿ ಎಸ್ ಪಿ ಆರ್ ಎಲ್ ಅಸ್ತಿತ್ವವಿದೆ. ಈ ಕಂಪೆನಿಯು ಪಿಸ್ಟನ್, ಪಿಸ್ಟನ್ ಪಿನ್ಸ್ ಮತ್ತು ರಿಂಗ್ಸ್, ಎಂಜಿನ್ ವಾಲ್ವ್ ಮೊದಲಾದ ಕೋರ್ ಪ್ರಾಡಕ್ಟ್ ನ ಮುಂಚೂಣಿ ಕಂಪೆನಿಯಾಗಿದೆ. ಸಿಎನ್ ಜಿ ಎಂಜಿನ್ ಗಳಲ್ಲಿ ಶೇಕಡ 90 ರಷ್ಟು ಪಾಲು ಕೂಡ ಹೊಂದಿದೆ. ಇಷ್ಟೇ ಅಲ್ಲ, ಕಂಪೆನಿಯು ಟಾಟಾ ಮತ್ತು ಅಶೋಕ್ ಲೇಲ್ಯಾಂಡ್ ಪ್ರಯೋಗಾರ್ಥ ಪರೀಕ್ಷೆ ನಡೆಸಿರೋ ಹೈಡ್ರೋಜನ್ ಬಸ್‌ಗಳಿಗೆ ಕೂಡ ಪಿಸ್ಟನ್ ಪೂರೈಕೆ ಮಾಡುತ್ತಿದೆ. ತನ್ನದೇ ಆರ್ ಅಂಡ್ ಡಿ – ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯದೊಂದಿಗೆ, ಸ್ಥಳೀಯ ಕಂಪೆನಿಗಳ ಅಗತ್ಯಗಳಿಗೆ ಮತ್ತು ಖರ್ಚುಗಳಿಗೆ ಹೊಂದಿಕೆಯಾಗುವಂತೆ ನಾಲ್ಕು ದಶಕಗಳ ಸದೃಢ ತಾಂತ್ರಿಕ ಪಾಲುದಾರಿಕೆಯೊಂದಿಗೆ ಈ ಕಂಪೆನಿಯು ಸಂಪೂರ್ಣ ಪರಿಹಾರಗಳನ್ನು ಅಂದ್ರೆ ಕಂಪ್ಲೀಟ್ ಸಲ್ಯೂಷನ್ ಒದಗಿಸುತ್ತಿದೆ.

ಗಾಜಿಯಾಬಾದ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪಥ್ರೇದಿಯಲ್ಲಿ ಕಂಪೆನಿಯ ಪಿಸ್ಟನ್, ಪಿಸ್ಟನ್ ಪಿನ್, ಪಿಸ್ಟನ್ ರಿಂಗ್ ಮತ್ತು ಎಂಜಿನ್ ವಾಲ್ವ್ ಗಳ ತಯಾರಿಕಾ ಘಟಕಗಳಿವೆ. ಇದಲ್ಲದೇ, ಕಂಪೆನಿಯು ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಲೆಕ್ಟ್ರಿಕ್ ಮೋಟರ್ ಮತ್ತು ಮೋಟಾರ್ ಕಂಟ್ರೋಲರ್ ಗಳ ತಯಾರಿಕಾ ಘಟಕಗಳನ್ನ ಕೂಡ ಹೊಂದಿದೆ. ಮತ್ತು ಇದೀಗ, ಮಧ್ಯಪ್ರದೇಶದ ಪಿಥಂಪುರದಲ್ಲಿ ಹೊಸ ತಯಾರಿಕಾ ಘಟಕ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.

ಕಂಪೆನಿಯ ಆದಾಯದ ಶೇಕಡ 82 ರಷ್ಟು ದೇಶೀಯ ಮಾರುಕಟ್ಟೆಯಿಂದ ದೊರೆತರೆ, ಉಳಿದ ಶೇಕಡ 18 ರಷ್ಟು ರಫ್ತಿನಿಂದ ಬರುತ್ತಿದೆ. ರಫ್ತುಗಳ ಬಗ್ಗೆ ಮಾತನಾಡುವುದಾದರೆ ಕಂಪೆನಿಯು ಯುಕೆ, ಜರ್ಮನಿ, ಆಸ್ಟ್ರಿಯಾ, ಇಟಲಿ, ಚೀನಾ, ಅಮೆರಿಕ, ಸ್ಪೇನ್, ರೊಮೇನಿಯಾ, ಟರ್ಕಿ, ಜಪಾನ್, ಥಾಯ್ಲೆಂಡ್, ಬ್ರೆಜಿಲ್, ಇಂಡೋನೇಷ್ಯಾ ಮತ್ತು ಮೆಕ್ಸಿಕೋ ದೇಶಗಳ ಆಟೊಮೊಬೈಲ್ ವಲಯಕ್ಕೆ ಇಲ್ಲಿಂದ ರಫ್ತು ಮಾಡುತ್ತಿದೆ. ಭಾರತದಲ್ಲಿ, ಮಾರುತಿ, ಮಹೀಂದ್ರಾ, ಹೋಂಡಾ, ಫೋರ್ಡ್, ನಿಸ್ಸಾನ್, ಟಾಟಾ, ಬಜಾಜ್, ಹೀರೋ, ಟಿವಿಎಸ್, ಯಮಾಹಾ, ಅಶೋಕ್ ಲೇಲ್ಯಾಂಡ್, ಡೈಮ್ಲರ್, ವಿಇ ಕಮರ್ಷಿಯಲ್, ಸ್ವರಾಜ್, ಮೊದಲಾದವುಗಳು ಶ್ರೀರಾಮ್ ಪಿಸ್ಟನ್ಸ್ ಗ್ರಾಹಕರು. ಜಾಗತಿಕ ಕಂಪೆನಿಗಳಾದ ಜಾಗ್ವರ್ ಲ್ಯಾಂಡ್ ರೋವರ್ (ಜೆಎಲ್‌ಆರ್), ಜೆಸಿಬಿ, ಬಿಎಂಡಬ್ಲ್ಯೂ, ಮೋಟೋರ್ರಾಡ್, ವೋಲ್ಕಾಸ್ವೇಗನ್, ರೋಟಾಕ್ಸ್, ಝೆಡ್ ಎಫ್ ವಾಬ್ಕೋ ಮೊದಲಾದವುಗಳು ಎಸ್ ಆರ್ ಪಿ ಎಲ್ ನ ಪ್ರಮುಖ ಗ್ರಾಹಕ ಕಂಪೆನಿಗಳಾಗಿವೆ.

ಹಾಗಿದ್ದರೆ ಕಂಪನಿಯ ಮುಂದಿನ ಬೆಳವಣಿಗೆ ಹೇಗೆ ಇರಲಿದೆ ಎನ್ನುವುದನ್ನು ನಾವು ನೋಡಿಕೊಂಡು ಬರಬೇಕು. ಕೋರ್ ಪ್ರಾಡಕ್ಟ್ ಅಂದ್ರೆ ಮೂಲ ಉತ್ಪನ್ನಗಳಲ್ಲಿ ತನ್ನ ಸದೃಢ ಅಸ್ತಿತ್ವ ಇನ್ನಷ್ಟು ಬಲಪಡಿಸುವುದಕ್ಕೆ ಕಂಪೆನಿ ಪ್ರಯತ್ನ ಮಾಡಿಕೊಂಡು ಬಂದಿದೆ. ಇದಕ್ಕಾಗಿ, ಕಂಪೆನಿಯು ಪರಿಸರ ಸ್ನೇಹಿ ಎಂಜಿನ್ ಆಯ್ಕೆಗಳಾದ ಸಿ ಎನ್ ಜಿ ಮತ್ತು ಹೈಡ್ರೋಜನ್ ನಂತಹ ಸಲ್ಯೂಷನ್ ಗಳನ್ನ ಅಭಿವೃದ್ಧಿ ಪಡಿಸೋಕೆ ಕಂಪೆನಿ ಗಮನಹರಿಸುತ್ತಿದೆ. ಜರ್ಮನಿ ಮತ್ತು ಜಪಾನ್ ದೇಶಗಳ ಅಂತಾರಾಷ್ಟ್ರೀಯ ತಂತ್ರಜ್ಞಾನದಾತರೊಂದಿಗಿನ ಸಹಯೋಗವು, ಕಂಪೆನಿಯು ಭಾರತಕ್ಕೆ ಇತ್ತೀಚಿನ ತಂತ್ರಜ್ಞಾನವನ್ನ ತರೋದಕ್ಕೆ ಸಹಕಾರಿಯಾಗಿದೆ. ಜೊತೆಗೆ, ಎಂಜಿನಿಯರಿಂಗ್ ವಲಯದಲ್ಲಿ ಕಂಪೆನಿಯ ವೆಚ್ಚ ನಿಯಂತ್ರಣ ಮಾಡಿಕೊಂಡು ಬಂದಿದೆ.ಯೂ

ಯುರೋಪ್ ನ ಜರ್ಮನಿ ಮತ್ತು ಯುಕೆಗಳಲ್ಲಿ 2020 ರಿಂದ 2022 ರ ಅವಧಿಯಲ್ಲಿ ಕಂಡುಬಂದಿದ್ದ ವಿದ್ಯುದೀಕರಣದ ಕ್ಷಿಪ್ರ ಪ್ರಗತಿ, ಇತ್ತೀಚಿನ ತಿಂಗಳುಗಳಲ್ಲಿ ಇಳಿಮುಖವಾಗಿದೆ. ಅಮೆರಿಕ ಮತ್ತು ಫ್ರಾನ್ಸ್ ನಂತಹ ದೇಶಗಳಲ್ಲಿ ಹೈಬ್ರಿಡ್ ವಾಹನಗಳ ಮಾರಾಟ ಹೆಚ್ಚಳವೇ ಈ ನಿಧಾನಗತಿಗೆ ಕಾರಣ ಅಂತಾ ಹೇಳಬಹುದು. ಇವಿ ವಾಹನಗಳತ್ತ ನಿಧಾನಗತಿಯ ಟ್ರೆಂಡ್ ಇದ್ದರೆ ಅಥವಾ ಅದರ ಪ್ರಗತಿಯ ಓಟ ಕುಂಠಿತವಾದರೆ ಆಗ ಆಂತರಿಕ ದಹಕ – ಇಂಟರ್ನಲ್ ಕಂಬಷನ್ ಎಂಜಿನ್ ಗಳನ್ನ ಪೂರೈಸೋ ಎಸ್ ಪಿ ಆರ್ ಎಲ್ ನಂತಹ ಕಂಪೆನಿಗಳ ಪ್ರಗತಿಗೆ ಪೂರಕವಾಗಲಿದೆ. ಅದೇ ರೀತಿ, ದೇಶೀಯ ಮಾರುಕಟ್ಟೆಯಲ್ಲಿ, ಇವಿ ವಾಹನಗಳತ್ತ ಒಲವಿನಲ್ಲಿ ಸ್ಥಿರತೆ ಕಂಡುಬಂದಿದೆ. ಕಳೆದ ವರ್ಷ, ದ್ವಿಚಕ್ರ ವಾಹನಗಳಲ್ಲಿ ಈ ದರ ಶೇಕಡ 5-6 ರಷ್ಟಿದ್ದು, ಪ್ರಯಾಣಿಕ ವಾಹನಗಳಲ್ಲಿ ಶೇಕಡ 2 ರಷ್ಟಿದೆ.

ಕಂಪನಿಯ ಬ್ಯುಸಿನೆಸ್ ಚೆನ್ನಾಗಿದ್ದು ಜೊತೆಗೆ ಬೆಳವಣಿಗೆಗೂ ಕೂಡ ಉತ್ತಮ ಅವಕಾಶ ಇದೆ. ಆದರೆ ಈ ಕಂಪನಿಯಲ್ಲಿ ಹೂಡಿಕೆಗೆ ರಿಸ್ಕ್​ ಅಂತಾ ಏನಾದರೂ ಇದೆಯಾ ಎನ್ನುವ ಪ್ರಶ್ನೆ ಎಂಬ ಪ್ರಶ್ನೆ ಸಹ ಮೂಡುತ್ತದೆ. ಈ ಕಂಪನಿಯ 360 ಡಿಗ್ರಿ ಮುನ್ನೋಟವನ್ನು ಸಹ ನಾವು ನೋಡಿಕೊಂಡು ಬರಬೇಕಿದೆ.

ದ್ವಿ ಚಕ್ರ ವಾಹನಗಳ ಎಂಜಿನ್ ಗಳ ಬಿಡಿ ಭಾಗಗಳ ಮಾರಾಟವು ಕಂಪೆನಿಯ ಒಟ್ಟಾರೆ ಆದಾಯಕ್ಕೆ ಶೇಕಡ 20 ರಷ್ಟು ಕೊಡುಗೆ ನೀಡುತ್ತದೆ. ಜೊತೆಗೆ ಕಂಪೆನಿಗೆ ಈ ವಲಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಗಳಿಂದ ಎದುರಾಗಬಹುದಾದ ಸವಾಲುಗಳ ಬಗ್ಗೆ ಕೂಡ ಗೊತ್ತಿದೆ. ಇದನ್ನೆಲ್ಲಾ ಮನಸ್ಸಿನಲ್ಲಿಟ್ಕೊಂಡು, ತನ್ನ ಪ್ರಾಡಕ್ಟ್ ಪೋರ್ಟ್ ಫೋಲಿಯೋ ವಿಸ್ತರಿಸಿ, ತಂತ್ರಜ್ಞಾನ ರಿಸ್ಕ್ ಕಡಿಮೆ ಮಾಡಿ, ಭವಿಷ್ಯದ ಪ್ರಗತಿಗೆ ಉತ್ತೇಜನ ಕೊಡೋದಕ್ಕೆ ಕಂಪೆನಿಯು ಇವಿಗಳಿಗೆ ಸಂಬಂಧಿಸಿದ ಸಹವರ್ತಿ ಕಂಪೆನಿಯನ್ನ ಸ್ಥಾಪಿಸಿದೆ. ಇವಿ ವಾಹನಗಳಿಗೆ ಸಂಬಂಧಿಸಿದ ಮೋಟಾರ್ಸ್ ಮತ್ತು ಕಂಟ್ರೋಲರ್ ಗಳಿಗೆ ದೇಶೀಯ ಪರಿಹಾರ ಅಭಿವೃದ್ಧಿಪಡಿಸ್ತಾ ಇರೋ ಕೊಯಮತ್ತೂರು ಮೂಲದ ಕಂಪೆನಿ ಇಎಂಎಫ್‌ಐ ನಲ್ಲಿ ಎಸ್ ಪಿ ಆರ್ ಎಲ್ ಶೇಕಡ 66 ರಷ್ಟು ಪಾಲು ಪಡೆದಿದೆ. ಇಷ್ಟೇ ಅಲ್ಲ, ಹೈ ಪ್ರೆಸಿಷನ್ ಮತ್ತು ಇಂಜೆಕ್ಷನ್ ಮೋಲ್ಡಿಂಗ್ ಪಾರ್ಟ್ಸ್ ಗಳನ್ನ ತಯಾರು ಮಾಡೋ ಟಾಕಾಹಟಾ ಪ್ರಿಸಿಷನ್ ಕಂಪೆನಿಯಲ್ಲಿ ಶೇಕಡ 62 ರಷ್ಟು ಪಾಲನ್ನ ಹೊಂದಿದೆ. ಈ ಕಂಪೆನಿಯು ಪವರ್ ಟ್ರೇನ್ ಅಗ್ನೋಸ್ಟಿಕ್ ಕಾಂಪೊನೆಂಟ್ ಗಳ ವಿಸ್ತರಣೆಯಲ್ಲಿ ಕೂಡ ತೊಡಗಿದೆ.

ಇನ್ನು ಕಂಪೆನಿಯ ಹಣಕಾಸು ಸ್ಥಿತಿಗತಿ ಏನು? ಅವುಗಳ ಪರ್ಫಾರ್ಮೆನ್ಸ್ ಚೆನ್ನಾಗಿದ್ಯಾ? ಈ ವಿಚಾರದಲ್ಲಿಯೇ ಕಂಪನಿಯ ನಿಜವಾದ ಆರ್ಥಿಕ ಸ್ಥಿತಿಗತಿಯ ಚಿತ್ರಣ ಇದೆ.. ಈಗ ಅಂಕಿ ಅಂಶಗಳ ಸಮೇತ ಆ ಮಾಹಿತಿಯನ್ನು ನೊಡೋಣ..

ಎಸ್ ಪಿ ಆರ್ ಎಲ್ ನ ಫೈನ್ಯಾನ್ಷಿಯಲ್ ಪರ್ಫಾರ್ಮೆನ್ಸ್ ಸದೃಢವಾಗಿದೆ. ಹಣಕಾಸು ವರ್ಷ 21 ರಲ್ಲಿ ಆದಾಯ 1 ಸಾವಿರದ 597 ಕೋಟಿ ರೂಪಾಯಿಯಿಂದ 2 ಸಾವಿರದ 609 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಈ ಅವಧಿಯಲ್ಲಿ, ಇಬಿಐಟಿಡಿಎ, ಅಂದ್ರೆ ಬಡ್ಡಿ ಮತ್ತು ತೆರಿಗೆ ಪೂರ್ವ ಗಳಿಕೆ ಅಥವಾ ಆಪರೇಟಿಂಗ್ ಪ್ರಾಫಿಟ್ ಕೂಡ 216 ಕೋಟಿ ರೂಪಾಯಿಯಿಂದ 460 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಅದೇ ರೀತಿ, ಲಾಭ ಕೂಡ 89 ಕೋಟಿ ರೂಪಾಯಿಯಿಂದ 294 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಹಣಕಾಸು ವರ್ಷ 2024 ರ ಮೊದಲ 9 ತಿಂಗಳ ಬಗ್ಗೆ ಹೇಳೋದಾದ್ರೆ, ಮಾರಾಟ ಪ್ರಮಾಣ 1 ಸಾವಿರದ 908 ಪಾಯಿಂಟ್ 3 ಕೋಟಿ ರೂಪಾಯಿಯಿಂದ 2 ಸಾವಿರದ 233 ಪಾಯಿಂಟ್ 8 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಲಾಭ ಅಥವಾ ಪ್ರಾಫಿಟ್ 202 ಪಾಯಿಂಟ್ 5 ಕೋಟಿ ರೂಪಾಯಿಯಿಂದ 322 ಕೋಟಿ ರೂಪಾಯಿಗೆ ಹೆಚ್ಚಿದೆ. ಹಾಗಾಗಿ ಕಂಪೆನಿಯ ಹಣಕಾಸು ಸ್ಥಿತಿಗತಿ ಸದೃಢವಾಗಿದೆ ಎನ್ನುವುದು ಗೊತ್ತಾಯಿತು.

ಹಣಕಾಸು ವರ್ಷ 24 ರಲ್ಲಿ ಕಂಪೆನಿಯ ಮಾರಾಟ 3 ಸಾವಿರದ 75 ಕೋಟಿ ರೂಪಾಯಿಯಷ್ಟಿರುವ ನಿರೀಕ್ಷೆ ಇದೆ. ಕಳೆದ ವರ್ಷ 294 ಕೋಟಿ ರೂಪಾಯಿ ಇದ್ದ ಕಂಪೆನಿಯ ಪ್ರಾಫಿಟ್ 435 ಕೋಟಿ ರೂಪಾಯಿಯಷ್ಟಾಗಲಿದೆ ಅಂತಾ ಪ್ರಾಫಿಟ್ ಮಾರ್ಟ್ ಸೆಕ್ಯುರಿಟೀಸ್ ಅಂದಾಜಿಸಿದೆ. ಪ್ರಾಫಿಟ್ ನಲ್ಲಿ ಸದೃಢ ಪ್ರಗತಿ ಕಾಣುತ್ತಾ ಇರುವುದರಿಂದ ಕಂಪೆನಿಯ ಇಪಿಎಸ್ 98 ರೂಪಾಯಿ ಆಗೋ ಸಾಧ್ಯತೆ ಇದೆ. ಕಳೆದ ಹಣಕಾಸು ವರ್ಷದಲ್ಲಿ ಇಪಿಎಸ್ 67 ರೂಪಾಯಿಯಷ್ಟಿತ್ತು. ಹಾಗೇ ಮುಂದಿನ ಎರಡು ವರ್ಷಗಳಲ್ಲಿ ಅಂದರೆ ಹಣಕಾಸು ವರ್ಷ 2026ರ ವೇಳೆಗೆ ಕಂಪೆನಿಯ ಮಾರಾಟ (ಸೇಲ್ಸ್) 4 ಸಾವಿರ ಕೋಟಿ ರೂಪಾಯಿಗೆ ಹಾಗೇ ಪ್ರಾಫಿಟ್ 600 ಕೋಟಿ ರೂಪಾಯಿಗೆ ಹೆಚ್ಚಾಗುವ ನಿರೀಕ್ಷೆ ಇದೆ. ಆಗ ಇಪಿಎಸ್ 135 ರೂಪಾಯಿಯಷ್ಟಾಗತ್ತದೆ. ಪ್ರಸ್ತುತ ಇರೋ ದರದಲ್ಲಿ, ಎಸ್ ಪಿ ಆರ್ ಎಲ್ ನ ಷೇರುಗಳು ಹಣಕಾಸು ವರ್ಷ 2026ರ ಅಂದಾಜು ಇಪಿಎಸ್‌ನ 13 ಪಟ್ಟು ಪಿಇ ಗುಣಕದಲ್ಲಿ ವಹಿವಾಟು ನಡೆಸುತ್ತಿವೆ. ಇದು ಆಕರ್ಷಕವಾಗಿದೆ, ಫಲಿತಾಂಶದಲ್ಲಿ ಸದೃಢ ಪ್ರಗತಿ ನಿರೀಕ್ಷೆ ಇದೆ, ಪ್ರಾಡಕ್ಟ್ ಲೈನ್‌ಅಪ್ ಕೂಡ ಸ್ಟ್ರಾಂಗ್ ಆಗಿದೆ, ಜೊತೆಗೆ ಆಟೊಮೊಟಿವ್ ವಲಯದಲ್ಲಿ ಹೆಚ್ಚಾಗುತ್ತಿರುವ ಬ್ಯುಸಿನೆಸ್ ನಿಂದಾಗಿ ಷೇರುಗಳು ರೀರೇಟ್ ಆಗೋ ಸಾಧ್ಯತೆ ಕೂಡ ಇದೆ. 12-18 ತಿಂಗಳ ಅವಧಿಯಲ್ಲಿ ಷೇರುಗಳ 2 ಸಾವಿರದ 295 ರೂಪಾಯಿ ಟಾರ್ಗೆಟ್ ಸಾಧಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ ಆಗಿದೆ.

Published: April 26, 2024, 15:12 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ