` insurers will now return unclaimed money to customers irdai | ವಿಮೆ ಮಾಡಿಸಿ ಮರೆತರೆ ಆ ಹಣ ಯಾರ ಪಾಲಾಗುತ್ತದೆ? | Money9 Kannada

ವಿಮೆ ಮಾಡಿಸಿ ಮರೆತರೆ ಆ ಹಣ ಯಾರ ಪಾಲಾಗುತ್ತದೆ?

ವರದಿಯ ಪ್ರಕಾರ, ಲೈಫ್ ಇನ್ಶುರೆನ್ಸ್‌ ಕಂಪನಿಗಳ ಬಳಿ ಕ್ಲೇಮ್ ಮಾಡದ ಹಣವೇ 25 ಸಾವಿರ ಕೋಟಿ ರೂ. ಇದೆ. ಇದರಲ್ಲಿ ಅತಿದೊಡ್ಡ ಪಾಲು ಅಂದರೆ 84% ಅಂದರೆ ಸುಮಾರು 21 ಸಾವಿರ ಕೋಟಿ ರೂ. ಎಲ್‌ಐಸಿ ಬಳಿಯೇ ಇದೆ.

ಇನ್ಶುರೆನ್ಸ್‌ ಕಂಪನಿಗಳೂ ಈಗ ಬ್ಯಾಂಕ್‌ಗಳ ಹಾಗೆ ಕ್ಲೇಮ್ ಮಾಡದೇ ಇರುವ ಹಣವನ್ನು ತಮ್ಮ ಗ್ರಾಹಕರಿಗೆ ವಾಪಸ್ ಮಾಡುತ್ತವೆ. ಇನ್ಶುರೆನ್ಸ್‌ ಕಂಪನಿಗಳ ಬಳಿ ಈ ಅನ್‌ಕ್ಲೇಮ್ಡ್‌ ಹಣ ಹೆಚ್ಚಾಗುತ್ತಲೇ ಇರುವ ಬಗ್ಗೆ ರೆಗ್ಯುಲೇಟರ್ ಮತ್ತು ಸರ್ಕಾರಗಳಿಗೆ ಆತಂಕ ಆಗಿದೆ. ಇನ್ಶುರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ IRDA ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ಪಾಲಿಸಿದಾರರಿಗೆ ಈ ಅನ್‌ಕ್ಲೇಮ್ಡ್‌ ಹಣವನ್ನು ರಿಟರ್ನ್ ಮಾಡಿ ಅಂತ ಇನ್ಶುರೆನ್ಸ್‌ ಕಂಪನಿಗಳಿಗೆ IRDA ಸೂಚನೆ ನೀಡಿದೆ. ಬಾಕಿ ಇರುವ ಹಣ ಯಾರಿಗೆ ಸೇರಿದ್ದೋ ಅವರನ್ನು ಹುಡುಕುವಂತೆಯೂ ವಿಮೆ ಕಂಪನಿಗಳಿಗೆ ಇದು ತಿಳಿಸಿದೆ. ಈ ವಿಷಯದಲ್ಲಿ ಇನ್ಶುರೆನ್ಸ್‌ ಏಜೆಂಟರ ಸಹಾಯವನ್ನು ವಿಮೆದಾರರು ಪಡೆದುಕೊಳ್ಳಬೇಕು.

ವರದಿಯ ಪ್ರಕಾರ, ಲೈಫ್ ಇನ್ಶುರೆನ್ಸ್‌ ಕಂಪನಿಗಳ ಬಳಿ ಕ್ಲೇಮ್ ಮಾಡದ ಹಣವೇ 25 ಸಾವಿರ ಕೋಟಿ ರೂ. ಇದೆ. ಇದರಲ್ಲಿ ಅತಿದೊಡ್ಡ ಪಾಲು ಅಂದರೆ 84% ಅಂದರೆ ಸುಮಾರು 21 ಸಾವಿರ ಕೋಟಿ ರೂ. ಎಲ್‌ಐಸಿ ಬಳಿಯೇ ಇದೆ. ಇದರಲ್ಲಿ ಮೆಚ್ಯುರಿಟಿ ಮೊತ್ತ, ಡೆತ್ ಮತ್ತು ಸರ್ವೈವಲ್ ಬೆನಿಫಿಟ್‌ಗಳೂ ಸೇರಿವೆ. ನಿಯಮಗಳ ಪ್ರಕಾರ, ಸೆಟಲ್‌ಮೆಂಟ್‌ ದಿನಾಂಕದಿಂದ ಆರು ತಿಂಗಳೊಳಗೆ ಕ್ಲೇಮ್ ಮಾಡಿಲ್ಲ ಎಂದಾದರೆ, ಅಂತಹ ಹಣವನ್ನು ಅನ್‌ಕ್ಲೇಮ್ಡ್‌ ಎಂದು ಕರೆಯಲಾಗುತ್ತದೆ. 1 ಸಾವಿರ ಹಾಗೂ ಅದಕ್ಕಿಂತ ಹೆಚ್ಚು ಹಣ ಅನ್‌ಕ್ಲೇಮ್ಡ್‌ ಆಗಿದ್ದರೆ, ಅಂತಹ ಪಾಲಿಸಿಹೋಲ್ಡರ್‌ಗಳ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು IRDA ಹೇಳಿದೆ.

ಅಷ್ಟೇ ಅಲ್ಲ, ಇತ್ತೀಚಿನ ಸುತ್ತೋಲೆಯಲ್ಲಿ, ಅನ್‌ಕ್ಲೇಮ್ಡ್ ಮನಿ ಎಂದು ಯಾವುದನ್ನು ಗುರುತಿಸಬೇಕು ಎಂಬುದಕ್ಕೆ ವ್ಯಾಖ್ಯಾನವನ್ನೂ IRDA ಬದಲಿಸಿದೆ. ಈಗ, ವಿವಾದದಲ್ಲಿ ಇರುವ ಪಾಲಿಸಿಗಳು, ಕ್ಲೇಮ್‌ ಮಾಡುವುದಕ್ಕೆ ಆಕ್ಷೇಪಣೆ ಇರುವ ಹಣ ಅಥವಾ ಸರ್ಕಾರದ ಏಜೆನ್ಸಿಗಳು ಫ್ರೀಜ್ ಮಾಡಿರುವ ಹಣವನ್ನೂ ಅನ್‌ಕ್ಲೇಮ್ಡ್‌ ಎಂದು ಗುರುತಿಸಲಾಗುವುದಿಲ್ಲ. ಕಸ್ಟಮರ್‌ಗಳು ಅಥವಾ ಬೆನಿಫಿಶಿಯರಿಗಳನ್ನು ಪತ್ತೆ ಮಾಡಲು ಸಾಧ್ಯವಾಗದ ಹಣವನ್ನು ಅನ್‌ಕ್ಲೇಮ್ಡ್ ಪಾಲಿಸಿ ಕ್ಯಾಟಗರಿಯಲ್ಲಿ ಹಾಕಬೇಕು. ಈಗಾಗಲೇ ಇರುವ ಎಲ್ಲ ಕಸ್ಟಮರ್‌ಗಳು ಮತ್ತು ಹೊಸ ಕಸ್ಟಮರ್‌ಗಳ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಹುಡುಕುವ ವ್ಯವಸ್ಥೆಯನ್ನೂ ಮಾಡುವಂತೆ ಇದು ಸೂಚನೆ ನೀಡಿದೆ.

ಇನ್ಶುರೆನ್ಸ್‌ ಕಂಪನಿಗಳಿಗೆ ಐದು ಪ್ರಮುಖ ಸೂಚನೆಗಳನ್ನು IRDA ನೀಡಿದೆ. ಮೊದಲನೆಯದು, ಪಾಲಿಸಿ ರಿನ್ಯೂವಲ್ ಸಮಯದಲ್ಲಿ ಗ್ರಾಹಕರ ಮೊಬೈಲ್ ನಂಬರ್, ಇಮೇಲ್ ಅಡ್ರೆಸ್‌ ಮತ್ತು ನಾಮಿನಿ ವಿವರವನ್ನು ಇನ್ಶುರೆನ್ಸ್‌ ಕಂಪನಿಗಳು ಅಪ್‌ಡೇಟ್ ಮಾಡಬೇಕು. ಎರಡನೆಯದು, ಆನ್‌ಲೈನ್‌ನಲ್ಲಿ ಕಾಂಟ್ಯಾಕ್ಟ್ ನಂಬರ್ ಮತ್ತು ಬ್ಯಾಂಕ್ ಡೀಟೇಲ್ಸ್‌ ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಪಾಲಿಸಿದಾರರಿಗೆ ಇನ್ಶುರೆನ್ಸ್‌ ಕಂಪನಿಗಳು ನೀಡಬೇಕು. ಅನ್‌ಕ್ಲೇಮ್ಡ್‌ ಪಾಲಿಸಿಗಳ ಸಂಬಂಧ ಕಸ್ಟಮರ್‌ಗಳಿಗೆ ಕಾಂಟ್ಯಾಕ್ಟ್ ಮಾಡುವುದಕ್ಕೆ ಹಲವು ವಿಧಾನಗಳನ್ನು ಇನ್ಶುರೆನ್ಸ್ ಕಂಪನಿಗಳು ಒದಗಿಸಬೇಕು. ಪಾಲಿಸಿ ಮೆಚ್ಯುರಿಟಿ ದಿನಾಂಕವನ್ನು ಕನಿಷ್ಠ 6 ತಿಂಗಳ ಮೊದಲು ಪಾಲಿಸಿದಾರರಿಗೆ ಕಂಪನಿಗಳು ತಿಳಿಸಬೇಕು.
ಪಾಲಿಸಿಹೋಲ್ಡರ್‌ ಇನ್‌ಕಂಪ್ಲೀಟ್ ಕೆವೈಸಿ ವಿವರಗಳನ್ನು ಇನ್ಶುರೆನ್ಸ್ ಕಂಪನಿಗಳು ಸರಿಪಡಿಸಬೇಕು. ಅಪ್ರಾಪ್ತ ವಯಸ್ಕರ ಕೆವೈಸಿ ಪ್ರೋಸೆಸ್ ಅನ್ನು ಅವರು ಪ್ರಾಪ್ತ ವಯಸ್ಕರಾದ ಮೇಲೆ ಮತ್ತೊಮ್ಮೆ ಮಾಡಬೇಕು.

ಹಾಗಾದರೆ, ಇನ್ಶುರೆನ್ಸ್‌ ಸೆಕ್ಟರ್‌ನಲ್ಲಿ ಅನ್‌ಕ್ಲೇಮ್ಡ್‌ ಹಣ ಹೆಚ್ಚಳ ಆಗುತ್ತಿರೋದು ಯಾಕೆ? ಸೆಬಿಯಲ್ಲಿ ನೋಂದಿತ ಸಲಹೆಗಾರ ಜಿತೇಂದ್ರ ಸೋಲಂಕಿ ಹೇಳುವಂತೆ ಪಾಲಿಸಿ ಮಾರಾಟದ ಸಮಯದಲ್ಲಿ ಇನ್ಶುರೆನ್ಸ್ ಏಜೆಂಟರು ಸಂಪೂರ್ಣ ಮಾಹಿತಿಯನ್ನು ಮತ್ತು ಸರಿಯಾದ ವಿವರವನ್ನು ದಾಖಲಿಸಿರೋದಿಲ್ಲ. ಭಾರಿ ಸಂಖ್ಯೆಯ ಜನರು ತಮ್ಮ ವಿಳಾಸ ಮತ್ತು ಮೊಬೈಲ್ ನಂಬರ್ ಬದಲಿಸುತ್ತಿರುತ್ತಾರೆ. ಕೆಲವರು ಇನ್ಶುರೆನ್ಸ್ ಪಾಲಿಸಿ ಖರೀದಿ ಮಾಡಿ, ತಮ್ಮ ಕುಟುಂಬದ ಜೊತೆಗೆ ಡಾಕ್ಯುಮೆಂಟ್ ಹಂಚಿಕೊಂಡಿರುವುದಿಲ್ಲ. ಅಂತಹ ಪಾಲಿಸಿದಾರರು ಸತ್ತಾಗ, ಅವರ ಪ್ಯಾಮಿಲಿ ಮೆಂಬರ್‌ಗೆ ಕ್ಲೇಮ್ ಮಾಡುವುದಕ್ಕೆ ಆಗುವುದಿಲ್ಲ. ತಾನು ನಾಮಿನಿ ಆಗಿರುವ ಒಂದು ಇನ್ಶುರೆನ್ಸ್ ಪಾಲಿಸಿ ಇದೆ ಎಂದೇ ನಾಮಿನಿಗೆ ಗೊತ್ತಿರುವುದಿಲ್ಲ ಅಥವಾ ಅವರ ಬಳಿ ಪಾಲಿಸಿ ಡಾಕ್ಯುಮೆಂಟ್ ಇರುವುದಿಲ್ಲ. ಇನ್ಶುರೆನ್ಸ್‌ ಕಂಪನಿಗಳಲ್ಲಿ ಒಂದು ಪಾಲಿಸಿ ಅನ್‌ಕ್ಲೇಮ್ಡ್‌ ಆಗುವುದಕ್ಕೆ ಇದು ಪ್ರಮುಖ ಕಾರಣವಾಗಿದೆ.

10 ವರ್ಷಗಳವರೆಗೆ ಒಂದು ಇನ್ಶುರೆನ್ಸ್ ಕಂಪನಿಗೆ ಕ್ಲೇಮ್ ಬಂದಿಲ್ಲ ಎಂದಾದರೆ, ಅದನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿ SCWF ಗೆ ವರ್ಗಾವಣೆ ಮಾಡಲಾಗುತ್ತದೆ. ಹಿರಿಯ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ಸ್ಕೀಮ್‌ಗಳಿಗೆ ಈ ಹಣವನ್ನು ಬಳಸಲಾಗುತ್ತದೆ. ಯಾವುದೇ ಪಾಲಿಸಿದಾರರು ಅಥವಾ ಅವಲಂಬಿತ ಹಿರಿಯ ನಾಗರಿಕರು 25 ವರ್ಷಗಳವರೆಗೆ ಈ ಫಂಡ್‌ಗೆ ವರ್ಗಾವಣೆ ಮಾಡಿದ ಹಣವನ್ನು ಕ್ಲೇಮ್ ಮಾಡಬಹುದು. 25 ವರ್ಷಗಳವರೆಗೂ ಕ್ಲೇಮ್ ಮಾಡದೇ ಉಳಿದರೆ, ಅದನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ.

ಕ್ಲೇಮ್ ಮಾಡಿಲ್ಲದ ಪಾಲಿಸಿ ಬಗ್ಗೆ ತಿಳಿದುಕೊಳ್ಳಲು, ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ಹುಡುಕಾಟ ಸೌಲಭ್ಯವನ್ನು ಒದಗಿಸುವಂತೆ IRDAI ಸೂಚನೆ ನೀಡಿದೆ. ಇದರಿಂದ ಪಾಲಿಸಿದಾರರು ಅಥವಾ ಅವರ ಅವಲಂಬಿತರು ಅನ್‌ಕ್ಲೇಮ್ಡ್ ಹಣ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಕೊಳ್ಳಬಹುದು. ಇಂತಹ ಹಣದ ಬಗ್ಗೆ ತಿಳಿದುಕೊಳ್ಳಲು, ಪಾಲಿಸಿದಾರರ ಹೆಸರು, ಪ್ಯಾನ್, ಪಾಲಿಸಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನೀವು ನಮೂದಿಸಬೇಕು. ಅಷ್ಟೇ ಅಲ್ಲ, ಇನ್ಶುರೆನ್ಸ್ ಕಂಪನಿಗಳು ಅನ್‌ಕ್ಲೇಮ್ಡ್ ಹಣವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ತೋರಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಇನ್ಶುರೆನ್ಸ್ ಕಂಪನಿಗಳು ಈ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕು.

ಪಾಲಿಸಿ ಖರೀದಿ ಮಾಡಿದರೆ, ನಿಮ್ಮ ವಿಳಾಸ, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ವಿವರಗಳನ್ನು ಭರ್ತಿ ಮಾಡಬೇಕು. ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇದ್ದರೆ, ವಿಮೆ ಕಂಪನಿಯಲ್ಲಿ ಅದನ್ನೂ ಅಪ್‌ಡೇಟ್ ಮಾಡಿರಬೇಕು.ನಿಮ್ಮ ಎಲ್ಲ ಹೂಡಿಕೆಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಥವಾ ಡೈರಿಯಲ್ಲಿ ಇಟ್ಟಿರಬೇಕು. ನಿಮ್ಮ ಕುಟುಂಬದ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಬೇಕು. ಈ ವಿಷಯದಲ್ಲಿ ಸ್ವಲ್ಪ ನಿಷ್ಕಾಳಜಿ ಮಾಡಿದರೂ, ತೊಂದರೆಯಾಗುತ್ತದೆ.

Published: April 25, 2024, 14:17 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ